ಕಲಬುರಗಿ: ಮಳೆ ಕಡಿಮೆಯಾಗಿ ಪ್ರವಾಹದ ನೀರು ಇಳಿಮುಖವಾದ ನಂತರ ಪರಿಹಾರ ಕೇಂದ್ರಗಳಿಂದ ಮನೆಗಳತ್ತ ತೆರಳಿದ ಸಂತ್ರಸ್ತರಿಗೆ ಈಗ ವಿಷ ಜಂತುಗಳ ಕಾಟ ಶುರುವಾಗಿದೆ.
ಭೀಮಾ ನದಿ ಉಕ್ಕಿ ಹರಿದು ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿ ಕೆಲ ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಈಗ ನೀರು ಕಡಿಮೆಯಾಗಿರುವುದರಿಂದ ಮನೆಯ ಚಪ್ಪರ, ಸಂದಿಗಳಲ್ಲಿ ಅಡಗಿದ್ದ ಹಾವು, ಚೇಳು, ಕ್ರಿಮಿಕೀಟಗಳು ಹೊರ ಬರಲಾರಂಭಿಸಿದ್ದು, ಜನರಲ್ಲಿ ಆತಂಕ ಹುಟ್ಟಿಸಿವೆ. ಜಿಲ್ಲೆಯ ಅಫಜಲಪುರ ತಾಲೂಕಿನ ಹೊಳಿ ಭೋಸಗಾ ಗ್ರಾಮದಲ್ಲಿ ಹೊನಪ್ಪ ಶಿವಣಗಿ ಎಂಬುವವರ ಮನೆಯಲ್ಲಿ ಮೂರು ಹಾವುಗಳು ಏಕಕಾಲಕ್ಕೆ ಪ್ರತ್ಯಕ್ಷವಾಗಿವೆ.
ಹಾವುಗಳನ್ನು ಕಂಡು ಮನೆಯವರು ಹೌಹಾರಿದ್ದು, ಭಯದಲ್ಲೇ ಒಂದು ಹಾವನ್ನು ಹೊಡೆದು ಕೊಂದಿದ್ದಾರೆ. ಹಾವುಗಳು ಮನೆಯಲ್ಲೇ ಇರುವುದರಿಂದ ಕುಟುಂಬಸ್ಥರ ಆತಂಕ ಇಮ್ಮಡಿಯಾಗಿದೆ.