ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿ ಡಿಎಆರ್ ಮೈದಾನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ರಮದ ಬಗ್ಗೆ ಪಾರದರ್ಶಕ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರು ಯಾರೇ ಆದ್ರೂ ಬಿಡುವುದಿಲ್ಲ. ಉತ್ತರ ಪತ್ರಿಕೆಯಲ್ಲಿ ವ್ಯತ್ಯಾಸ ಗೊತ್ತಾದ ತಕ್ಷಣವೇ ಸಿಐಡಿಗೆ ವಹಿಸಿ, ಕಿಂಚಿತ್ತೂ ಸಮಯ ವೇಸ್ಟ್ ಮಾಡದೆ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ನೇಮಕಾತಿ ಅಕ್ರಮದ ಬಗ್ಗೆ ದೂರು ಬಂದ ತಕ್ಷಣ ಪರಿಶೀಲನೆಗೆ ಸೂಚಿಸಿದ್ದೇವೆ. ಕಲಬುರಗಿಯ ಕೆಲವು ಶಿಕ್ಷಣ ಸಂಸ್ಥೆಗಳು ಹಾಗೂ ಮಾಲೀಕರ ಮೇಲೆ ಈಗಾಗಲೇ ಕಾರ್ಯಾಚರಣೆ ಮೂಲಕ ಶೋಧ ನಡೆಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಣ್ಣಾ ದೇಸಾಯಿ, ಸಹಾಯ ಮಾಡಿದ ಸಿಆರ್‌ಪಿ ಪೇದೆ ರುದ್ರಗೌಡ ಬಂಧನ ಮಾಡಲಾಗಿದೆ. ಸಿಐಡಿಗೆ ಫ್ರೀ ಹ್ಯಾಂಡ್ ಕೊಡಲಾಗಿದ್ದು, ಮತ್ತಷ್ಟು ಆಳವಾಗಿ ಶೋಧಕ್ಕೆ ಸೂಚಿಸಿದ್ದೇನೆ. ಯುಪಿಎಸ್ಸಿ ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿದ್ರೂ ಕೆಲವರು ಭದ್ರತೆ ಮೀರಿ ವಾಮಮಾರ್ಗ ಅನುಸರಿಸಿದ್ದಾರೆ.
ಸದ್ಯ ದಿವ್ಯಾ ಹಾಗರಗಿ ಅವರಿಗೆ ನಮ್ಮ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲ. ಆದಾಗಿಯೂ ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. PSI ನೇಮಕಾತಿಗೆ ಮರು ಪರೀಕ್ಷೆ ನಡೆಸುವ ಬಗ್ಗೆ ಈಗಾಗಲೇ ಚಿಂತನೆ ನಡೆಸಿಲ್ಲ. ಸಿಐಡಿಗೆ ಮಧ್ಯಂತರ ವರದಿ ನೀಡಲು ಸೂಚಿಸಲಾಗಿದ್ದು, ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಬಿಜೆಪಿ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಸಾಫ್ಟ್ ಕಾರ್ನರ್?: ಸಿಎಂ ಬೊಮ್ಮಾಯಿ ಹೇಳಿದ್ದೇನು?
ಹುಬ್ಬಳ್ಳಿ ಗಲಭೆ ಪ್ರಕರಣ: ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುವ ವಾಸಿಂ ಪಠಾಣ್ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕೊಡುವ ವಿಡಿಯೋ ಅಷ್ಟೇ ಅಲ್ಲ, ಬೇರೆ-ಬೇರೆ ರೀತಿಯ ಸಾಕ್ಷ್ಯಾಧಾರಗಳು ಇರುತ್ತವೆ. ಇಲ್ಲಿರುವಂತಹ ಪ್ರತ್ಯಕ್ಷ ಸಾಕ್ಷಿ ಆಧಾರಗಳ ಮೇಲೆ ಸಮಗ್ರ ತನಿಖೆ ಆಗುತ್ತದೆ ಎಂದರು.