ಕಲಬುರಗಿ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗಾಗಿ ಹಲವು ವರ್ಷಗಳು ಕಳೆದರೂ ಹಲವೆಡೆ ಗೋಮಾಂಸ ದಂಧೆ ಇನ್ನು ನಿಂತಿಲ್ಲ. ಕಲಬುರಗಿಯಲ್ಲಿಯೂ ಸಹ ಗೋಮಾಂಸ ಮಾರಾಟ ದಂಧೆ ಎಗ್ಗಿಲ್ಲದೆ ಸಾಗಿದೆ. ಇದನ್ನ ತಡೆಯಬೇಕಾದ ಪೊಲೀಸರೇ ಇದ್ರಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಕೋಲ್ಡ್ ಸ್ಟೋರೇಜ್‌ನಲ್ಲಿ ಜಪ್ತಿ ಮಾಡಿ ಇಡಲಾಗಿದ್ದ 59 ಟನ್ ಗೋಮಾಂಸ ನಾಪತ್ತೆಯಾಗಿದೆ.
61ಟನ್ ಗೋಮಾಂಸ ವಶ : ಕಳೆದ ಸೆಪ್ಟೆಂಬರ್‌ನಲ್ಲಿ ನಗರದ ಹೊರ ವಲಯದಲ್ಲಿರುವ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ತಾಜ್ ಕೋಲ್ಡ್ ಸ್ಟೋರೇಜ್ ಮೇಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ವಿಶ್ವವಿದ್ಯಾಲಯದ ಪೊಲೀಸರು ದಾಳಿ ಮಾಡಿದ್ದರು. ದಾಳಿ ವೇಳೆ ಅಕ್ರಮವಾಗಿ ಶೇಖರಣೆ ಮಾಡಿಟ್ಟಿದ್ದ 61ಟನ್ ಗೋಮಾಂಸವನ್ನ ಜಪ್ತಿ ಮಾಡಿ ಕೋಲ್ಡ್ ಸ್ಟೋರೇಜ್ ಸೀಲ್ ಮಾಡಿದ್ದರು.
ಪೊಲೀಸ್ ವಶದಲ್ಲಿದ್ದ 59 ಟನ್ ಗೋಮಾಂಸ ನಾಪತ್ತೆ : ಆದರೆ, ಕಳೆದ ಕೆಲ ದಿನಗಳ ಹಿಂದೆ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ರಮ ಗೋಮಾಂಸವನ್ನ ವಿಲೇವಾರಿ ಮಾಡೋದಕ್ಕೆ ಪರವಾನಿಗೆ ತೆಗೆದುಕೊಂಡು ಪೊಲೀಸ್ ಅಧಿಕಾರಿಗಳು, ಗೋಮಾಂಸವನ್ನ ವಿಲೇವಾರಿ ಮಾಡಿದ್ದಾರೆ. ಜಪ್ತಿ ಸಮಯದಲ್ಲಿ ತೋರಿಸಿದ್ದ 61 ಟನ್ ಗೋಮಾಂಸದ ಪೈಕಿ 2 ಟನ್ ಗೋಮಾಂಸವನ್ನ ಮಾತ್ರ ವಿಲೇವಾರಿ ಮಾಡಿರೋದಾಗಿ ಉಲ್ಲೇಖ ಮಾಡಿದ್ದಾರೆ.
ತನಿಖೆಗೆ ಒತ್ತಾಯ : ಹಾಗಾದ್ರೆ, ಪೊಲೀಸ್ ವಶದಲ್ಲಿದ್ದ ಇನ್ನುಳಿದ ಗೋಮಾಂಸ ಎಲ್ಲಿ ನಾಪತ್ತೆಯಾಯ್ತು ಅನ್ನೋ ಪ್ರಶ್ನೆ ಇದೀಗ ಕಾಡುತ್ತಿದೆ. ಹಾಗಾಗಿ, ಪೊಲೀಸ್ ವಶದಲ್ಲಿದ್ದ ಗೋಮಾಂಸ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕಲಬುರಗಿ ಡಿಸಿಪಿ, ಎಸಿಪಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಒತ್ತಾಯಿಸಿದ್ದಾರೆ.
ಪೊಲೀಸ್ ವಶದಲ್ಲಿ 61 ಟನ್ ಗೋಮಾಂಸವನ್ನ ವಿಲೇವಾರಿ ಆದೇಶದಂತೆ ವಿಲೇವಾರಿ ಮಾಡೋದಕ್ಕೆ ಮುಂದಾದಾಗ 2 ಟನ್ ಗೋಮಾಂಸ ಮತ್ತು ಉಳಿದ ಖಾಲಿ ಡಬ್ಬಗಳನ್ನ ಜಪ್ತಿ ಮಾಡಿ, ಗೋಮಾಂಸವನ್ನ ವಿಲೇವಾರಿ ಮಾಡಿರೋದಾಗಿ ಸೂಚಿಸಿದ್ದಾರೆ. ಗೋಮಾಂಸ ಜಪ್ತಿ ಮಾಡಿದ ದಿನದಿಂದ ಹಿಡಿದು ವಿಲೇವಾರಿ ಮಾಡುವ ತನಕವು ಕೂಡ ಗೋಮಾಂಸ ಪೊಲೀಸರ ವಶದಲ್ಲಿಯೇ ಇದೆ. ಆದರೆ, ವಿಲೇವಾರಿ ಸಂದರ್ಭದಲ್ಲಿ ಏಕಾ ಏಕಿಯಾಗಿ 59 ಟನ್ ಗೋಮಾಂಸವನ್ನ ಅಕ್ರಮವಾಗಿ ಪೊಲೀಸರೆ ಸಾಗಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ : ಪೊಲೀಸ್ ವಶದಲ್ಲಿದ್ದ 59 ಟನ್ ಅಕ್ರಮ ಗೋಮಾಂಸ ನಾಪತ್ತೆ ಪ್ರಕರಣ ಸಂಬಂಧ ಇದೀಗ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. ತನಿಖೆ ನಡೆಸಿ ವರದಿ ಬಂದ ಬಳಿಕ ಅಕ್ರಮ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಾರೆ.