ಕಲಬುರಗಿ: ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಕಾರ್ಯಕರ್ತರ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾಗಾಂಧೀಜಿ ರಾಮರಾಜ್ಯದ ಕನಸು ಕಂಡರು. ಆದರೆ ಅದಕ್ಕೆ ತದ್ವಿರುದ್ಧವಾಗಿ ಈಗ ಮನೆ ಮನೆಯಲ್ಲಿಯೂ ರಾವಣರು ಹುಟ್ಟಿದ್ದಾರೆ. ಅದಕ್ಕಾಗಿಯೇ ಮನೆ ಮನೆಯಲ್ಲಿ ರಾಮ ಹುಟ್ಟಬೇಕಿದೆ. ಕಾಂಗ್ರೆಸ್ನಲ್ಲಿ ರಾವಣರು ಹುಟ್ಟುತ್ತಾರೆ ಅಂತ ಗಾಂಧೀಜಿಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್ ಗಾಂಧೀಜಿ ವಿಚಾರಧಾರೆಗೆ ವಿರುದ್ಧವಾಗಿದೆ. ಗಾಂಧೀಜಿಯ ರಾಮರಾಜ್ಯ ಅಂದ್ರೆ ನಿಜವಾಜ ಪ್ರಜಾಪ್ರಭುತ್ವ. ನಿಜವಾದ ಪ್ರಜಾಪ್ರಭುತ್ವ ಜಾರಿಗೆ ಬರಬೇಕೆಂದರೆ ಮನೆ ಮನೆಯಲ್ಲಿಯೂ ರಾಮ ಹುಟ್ಟಬೇಕಿದೆ ಎಂದು ಕಟೀಲ್ ಅಭಿಪ್ರಾಯಪಟ್ಟರು.
ಬಿಜೆಪಿ ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ಬಿಜೆಪಿ ಎಂದೂ ರಾಜೀ ಮಾಡಿಕೊಂಡಿಲ್ಲ. ಈ ಕಾರಣಕ್ಕಾಗಿಯೇ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ವಿಶ್ವದಲ್ಲಿಯೇ ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ ಎಂದು ಕಟೀಲ್ ಅಭಿಪ್ರಾಯಪಟ್ಟರು.