ಕಲಬುರಗಿ: ಕೊರೊನಾ ಭೀತಿಯಿಂದ ಜಿಲ್ಲೆಯ ಜನ ಆತಂಕದಲ್ಲಿದ್ದಾರೆ. ಆದ್ರೆ, ಜಿಲ್ಲಾ ಉಸ್ತವಾರಿ ಸಚಿವ ಗೋವಿಂದ ಕಾರಜೋಳ ಅವರು ಸಾರ್ವಜನಿಕರ ನೆರವಿಗೆ ಬರುತ್ತಿಲ್ಲ ಎಂದು ಆರೋಪಿಸಿ ಕಲಬುರಗಿ ಜನತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾರಕ ಖಾಯಿಲೆಗೆ ಓರ್ವ ವೃದ್ಧ ವ್ಯಕ್ತಿ ಸಾವನ್ನಪ್ಪಿದರೆ, ಇನ್ನಿಬ್ಬರಿಗೆ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿದೆ. ಇನ್ನು ಕೆಲವರಿಗೆ ಹೋಂ ಐಸೊಲೇಷನ್ ಹಾಗೂ ಶಂಕಿತ ಕೊರೊನಾ ಭೀತಿಯಿಂದ ಕೆಲವರನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ. ಆದರೂ ಕೂಡ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಇತ್ತ ಮುಖ ಮಾಡಿಲ್ಲ. ಕಾಟಾಚಾರಕ್ಕೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೈ ತೊಳೆದುಕೊಂಡಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ನಲ್ಲಿ ಸಚಿವ ಕಾರಜೋಳರಿಗೆ ಶ್ರದ್ಧಾಂಜಲಿ ಅರ್ಪಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.