ಕಲಬುರಗಿ: ಬೀಗ ಮುರಿದು ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳರಿಬ್ಬರನ್ನು ಕಲಬುರಗಿ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ರೋಜಾ ಠಾಣೆ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ನಗರದ ಇಸ್ಲಾಮಾಬಾದ್ ಕಾಲೋನಿಯ ಶೇಖ್ ಅಮೀರ್ ಹಾಗೂ ಮಹ್ಮದ್ ಗೌಸ್ ಎಂಬುವವರೇ ಬಂಧಿತ ಆರೋಪಿಗಳು. ಬಂಧಿತರಿಂದ 40 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಆಭರಣ 18 ಸಾವಿರ ನಗದು ಹಣ ಸೇರಿ ಸುಮಾರು 2.35 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂ.30ರಂದು ಸಾಯಂಕಾಲ ಇದೇ ಇಸ್ಲಾಮಾಬಾದ್ ಕಾಲೋನಿಯ ಅಬ್ಬಾಸ್ ಮಜೀದ್ ಹತ್ತಿರದ ಮನೆಯೊಂದರ ಬೀಗ ಮುರಿದು ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಲಾಗಿತ್ತು. ಈ ಕುರಿತು ಮಹ್ಮದ್ ರಫೀಕ್ ಎಂಬುವವರು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅಲ್ಲದೇ, ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೇರೆಯಾಗಿತ್ತು.
ಅಂತೆಯೇ, ಕಾರ್ಯಾಚರಣೆಗಿಳಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಕಳ್ಳತನ ನಡೆದು ಕೇವಲ ಮೂರು ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಬಡಾವಣೆಯ ಜನರು ಹಾಗೂ ನಗರ ಪೊಲೀಸ್ ಆಯುಕ್ತ ರವಿಕುಮಾರ, ಡಿಸಿಪಿ ಆಡೂರು ಶ್ರೀನಿವಾಸಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗನಿಗೆ MBBS ಸೀಟು ಕೊಡಿಸಲು ವೈದ್ಯ ತಂದೆಯ ಪರದಾಟ; ವಂಚಕರು ಪೀಕಿದ್ದು ₹1.16 ಕೋಟಿ!