ಕಲಬುರ್ಗಿ: ಜಿಲ್ಲೆ ಈ ಬಾರಿ ಅತಿವೃಷ್ಟಿ ಹಾಗೂ ಪ್ರವಾಹದ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಮುಂಗಾರಿನಿಂದ ಹಿಡಿದು ಆಗಾಗ ಸುರಿಯುತ್ತಲೇ ಇರೋ ಮಳೆ ಒಂದು ಕಡೆಯಾದ್ರೆ, ಮಹಾರಾಷ್ಷ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತೊಂದು ಕಡೆ. ಭೀಮಾ ನದಿ ಉಕ್ಕಿ ಹರಿದು ಲಕ್ಷಾಂತರ ಜನರನ್ನು ಬಿಕ್ಕುವಂತೆ ಮಾಡಿದೆ.
ಹೌದು, ಭೀಮಾ ನದಿ ಅಕ್ಕ ಪಕ್ಕದಲ್ಲಿ ಬರುವ ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹದ ನೀರು ಹೊಕ್ಕಿವೆ. ಸಾವಿರಾರು ಮನೆಗಳು ಜಲಾವೃತಗೊಂಡಿವೆ. ಸರ್ಕಾರ ನಡೆಸಿರೋ ಸಮೀಕ್ಷೆಯ ಪ್ರಕಾರವೆ ಜಿಲ್ಲೆಯಲ್ಲಿ 13,055 ಮನೆಗಳಿಗೆ ನೀರು ಹೊಕ್ಕಿದೆ. ನೀರು ಹೊಕ್ಕ ಮನೆಗಳಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದು ಹೋಗಿದ್ದು, ಅದಕ್ಕೆ ಇದುವರೆಗೂ ನಯಾಪೈಸೆ ಹಣ ಬಿಡುಗಡೆಗೊಂಡಿಲ್ಲ ಎಂಬುವುದು ಸಂತ್ರಸ್ತರ ಅಳಲು.
ಅಫಜಲಪುರ ತಾಲೂಕಿನ ಅಳ್ಳಗಿ ಸೇರಿ ಹಲವು ಗ್ರಾಮಗಳಲ್ಲಿ ಬಿದ್ದ ಮನೆಗಳಲ್ಲಿ ಉಳಿದುಕೊಳ್ಳಲಾಗದೆ ಈಗಲೂ ಶಾಲೆ ಹಾಗೂ ಸಮುದಾಯ ಭವನಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಪ್ರವಾಹದ ಜೊತೆ ನಾವೂ ಕೊಚ್ಚಿ ಹೋಗಿದ್ರೆ ಚೆನ್ನಾಗಿರುತ್ತಿತ್ತು. ಹೀಗೆ ನಿತ್ಯ ನರಕ ಅನುಭವಿಸೋ ಪರಿಸ್ಥಿತಿ ಬರ್ತಿರಲಿಲ್ಲ. ಇಷ್ಟೆಲ್ಲಾ ಸಂಕಷ್ಟ ಪಡುತ್ತಿದ್ದರೂ ಯಾವ ಜನಪ್ರತಿನಿಧಿಯೂ ತಮ್ಮ ಕಡೆ ಕಣ್ಣೆತ್ತಿ ನೋಡಿಲ್ಲ. ನಯಾ ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಶಿವಮ್ಮ ಎನ್ನುವ ಸಂತ್ರಸ್ಥ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಳೆಯ ಕಥೆಯಂತೂ ಶೋಚನೀಯ. ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಅಕ್ಟೋಬರ್ ತಿಂಗಳೊಂದರಲ್ಲಿಯೇ 1,79,654 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರಸಕ್ತ ಸಾಲಿನಲ್ಲಿ 3.70 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅದರಲ್ಲಿಯೂ ಕಲಬುರ್ಗಿ ರೈತರ ಜೀವನಾಡಿ ತೊಗರಿ ಅತಿ ಹೆಚ್ಚು ಹಾನಿಗೆ ತುತ್ತಾಗಿದೆ. ಜೊತೆಗೆ ಕಬ್ಬು, ಹತ್ತಿ, ಹೆಸರು, ಉದ್ದು, ಸೋಯಾಬಿನ್ ಇತ್ಯಾದಿಗಳ ಬೆಳೆಯೂ ಹಾನಿಗೀಡಾಗಿವೆ.