ಕಲಬುರಗಿ : ದಂಪತಿಯೋರ್ವರ ಇಬ್ಬರು ಹೆಣ್ಣು ಮಕ್ಕಳು ತಮ್ಮ ಮನೆಯಲ್ಲೇ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಶ್ವನಾಥ್ ಪುತ್ರಿಯರಾದ ಐಶ್ವರ್ಯ(20), ಸಾರಿಕಾ (17) ಆತ್ಮಹತ್ಯೆಗೆ ಶರಣಾದ ಸಹೋದರಿಯರು. ಐಶ್ವರ್ಯ ಬಿಕಾಂ ಫೈನಲ್ ಇಯರ್ ವಿದ್ಯಾರ್ಥಿ. 17 ವರ್ಷದ ಸಾರಿಕಾ ಎಸ್ಎಸ್ಎಲ್ಸಿ ಮುಗಿಸಿ ಪಿಯುಸಿಗೆ ಪ್ರವೇಶ ಪಡೆದಿದ್ದಳು.
ಇವರ ಮನೆಯ ಸಮೀಪದಲ್ಲೇ ಇದ್ದ ಯುವಕನೊಬ್ಬ ಸಾರಿಕಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಹುಚ್ಚು ಪ್ರೇಮಿಯ ಕಾಟದಿಂದ ಬಾಲಕಿ ಕಂಗಾಲಾಗಿದ್ದಳು. ಇದೇ ಕಾರಣದಿಂದ ಸಹೋದರಿಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಯುವಕನ ಬ್ಲಾಕ್ಮೇಲ್ ಆರೋಪ : ಸಾರಿಕಾ ಮನೆ ಸಮೀಪವೇ ಇದ್ದ ನಾಗು ಎಂಬ ಯುವಕ ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ಮಾಡುವ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಸಮಯದಲ್ಲಿ ಗ್ರಾಮದಲ್ಲೇ ಇದ್ದು ಸಾರಿಕಾಳ ಹಿಂದೆ ಬಿದ್ದಿದ್ದ. ಮದುವೆಯಾಗ್ತೇನೆ ಎಂದು ಹೇಳಿ ಯುವತಿಯನ್ನು ಗಾಳಕ್ಕೆ ಬೀಳಿಸಿದ್ದ.
ಇದು ಪೋಷಕರಿಗೆ ಗೊತ್ತಾಗಿ ತಮ್ಮ ಮಗಳ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದರು. ನಂತರ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದ ನಾಗು, ಫೋನ್ ಮಾಡಿ ತೊಂದ್ರೆ ಕೊಡಲು ಆರಂಭಿಸಿದ್ದಾನೆ. ಇದನ್ನರಿತ ಪೋಷಕರು ಮಗಳ ಮದುವೆ ಮಾಡಲು ನಿರ್ಧರಿಸಿದ್ದರು.
ನಿಶ್ಚಿತಾರ್ಥ ಕೂಡ ಮಾಡಿದ್ದರು. ಇದಕ್ಕೆ ಕುಪಿತಕೊಂಡ ಯುವಕ ಸಾರಿಕಾಳಿಗೆ ಬ್ಲಾಕ್ಮೇಲ್ ಮಾಡಲಾರಂಭಿಸಿದ್ದ. ಮದುವೆಯಾದ್ರೆ ತನ್ನ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಇದಕ್ಕೆ ಹೆದರಿದ ಅಕ್ಕ-ತಂಗಿ ನೇಣಿಗೆ ಶರಣಾಗಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಯಾರೂ ಇಲ್ಲದ ವೇಳೆ ಮನೆಯಲ್ಲೇ ನೇಣಿಗೆ ಶರಣು : ಲಾಕ್ಡೌನ್ನಿಂದಾಗಿ ಕಾಲೇಜುಗಳು ಇಲ್ಲದಿದ್ದರಿಂದ ವಿಶ್ವನಾಥ್ ಪುತ್ರಿಯರು ಮನೆಯಲ್ಲೇ ಇದ್ದರು. ಇತ್ತ ಇವರ ತಂದೆ ಗ್ರಾಮದಲ್ಲಿಯೇ ಹೋಟೆಲ್ ನೋಡಿಕೊಳುತ್ತಿದ್ದ.
ತಾಯಿ ಜಮೀನಿಗೆ ಹೋಗಿದ್ದಳು. ಈ ಸಮಯಕ್ಕೆ ಕಾಯುತ್ತಿದ್ದ ಐಶ್ವರ್ಯ, ಸಾರಿಕಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಸಂಜೆ 6 ಗಂಟೆಗೆ ಮನೆಗೆ ಬಂದ ತಾಯಿಗೆ ಮಕ್ಕಳು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿರುವುದನ್ನು ಕಂಡು ಮುಗಿಲು ಕತ್ತರಿಸಿ ಮೇಲೆ ಬಿದ್ದಂತದಾಗಿದೆ.
ಕಲಬುರಗಿ: ನೇಣು ಬಿಗಿದುಕೊಂಡು ಅಕ್ಕ-ತಂಗಿ ಆತ್ಮಹತ್ಯೆ
ಯುವತಿಯರ ಆತ್ಮಹತ್ಯೆಗೆ ನಾಗುವಿನ ಕಿರುಕುಳವೇ ಕಾರಣ ಎಂದು ಯುವತಿಯರ ತಂದೆ ವಿಶ್ವನಾಥ್ ಚಿಂಚೋಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ್ದಾರೆ. ತನಿಖೆ ನಂತರವೇ ಸಹೋದರಿಯರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.