ಕಲಬುರಗಿ: ಕಮಲಾಪುರ ತಾಲೂಕು ಮರಮಂಚಿ ತಾಂಡಾದಲ್ಲಿ ಸರ್ಕಾರಿ ನೌಕರರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಜಿಲ್ಲಾ ಆಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆ ತರಲು ಹೋದಾಗ ತಾಂಡಾ ಜನತೆ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದು ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡುವುದಾಗಲಿ, ಕೆಲಸಕ್ಕೆ ಅಡ್ಡಿಪಡಿಸುವುದಾಗಲಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಮಹಾರಾಷ್ಟ್ರದಿಂದ ಆಗಮಿಸಿದ 14 ಜನರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆತರಲು ವೈದ್ಯಕೀಯ ಸಿಬ್ಬಂದಿ ತಾಂಡಾಕ್ಕೆ ತೆರಳಿದ್ದರು. ಆ ಸಂದರ್ಭ ತಾಂಡ ಜನತೆ ವಾಹನ ಹಾಗೂ ಆ್ಯಂಬುಲೆನ್ಸ್ ಮೇಲೆ ಕಲ್ಲು ತೂರಾಟ ಮಾಡಿದ್ದಲ್ಲದೇ ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದರು. ಸುದ್ದಿ ತಿಳಿದು ತಾಂಡಕ್ಕೆ ತೆರಳಿದ ಪೊಲೀಸರ ಮೇಲೆಯೂ ದರ್ಪ ಮೆರೆದಿದ್ದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು. ಈ ಘಟನೆ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.