ಕಲಬುರಗಿ: ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾಗಿ ಕಂಗಾಲಾಗಿರುವ ಜಿಲ್ಲೆಯ 41 ಸಾವಿರ ರೈತರಿಗೆ ಬರುವ ಒಂದು ವಾರದಲ್ಲಿ 29.58 ಕೋಟಿ ರೂ. ಹಣ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕೃಷಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರಮುಖವಾಗಿ ತೊಗರಿ, ಹೆಸರು, ಉದ್ದು, ಸೋಯಾಬಿನ್ ಸೇರಿದಂತೆ ಅತಿವೃಷ್ಟಿಯಿಂದ ವಿವಿಧ ಬೆಳೆಗಳ ಒಟ್ಟಾರೆ 442626 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ. ಇದರಲ್ಲಿ ಈಗಾಗಲೇ ಪರಿಹಾರಕ್ಕೆ ನೋಂದಣಿಯಾದ 150409 ರೈತರ ಪೈಕಿ 139158 ರೈತರಿಗೆ 6 ಹಂತಗಳಲ್ಲಿ 97.07 ಕೋಟಿ ರೂ. ಪರಿಹಾರ ನೀಡಲಾಗಿದೆ. ಇದರ ಮುಂದುವರೆದ ಭಾಗವಾಗಿ 7ನೇ ಹಂತದಲ್ಲಿ 41 ಸಾವಿರ ರೈತರಿಗೆ 29.58 ಕೋಟಿ ರೂ. ಪರಿಹಾರ ವಾರದಲ್ಲಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 14 ಮಣ್ಣು ಪರೀಕ್ಷಾ ಕೇಂದ್ರಗಳಿದ್ದು, ಮಣ್ಣು ಪರೀಕ್ಷೆ ಮಾಡಿಕೊಂಡು ಬೆಳೆ ಬೆಳೆಯಲು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಮನುಷ್ಯ ಹುಷಾರಿಲ್ಲದ ಸಮಯದಲ್ಲಿ ವೈದ್ಯನನ್ನು ಕಂಡಾಗ ರಕ್ತ ಪರೀಕ್ಷೆ ಮಾಡಿದ ನಂತರವೆ ರೋಗದ ಮೂಲ ಕಂಡುಹಿಡಿದು ಹೇಗೆ ಚಿಕಿತ್ಸೆ ನೀಡುತ್ತಾರೋ ಅದೇ ರೀತಿಯಲ್ಲಿ ಮಣ್ಣು ಪರೀಕ್ಷೆ ಮಾಡಿ ಯಾವ ಬೆಳೆ ಬೆಳೆದರೆ ನಿಮಗೆ ಅನುಕೂಲ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಿ ಎಂದು ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.