ಕಲಬುರಗಿ: ಅನಾರೋಗ್ಯದ ಹಿನ್ನೆಲೆ ಮನೆಯಲ್ಲಿ ಎಎಸ್ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪೊಲೀಸ್ ಕ್ವಾರ್ಟಸ್ನಲ್ಲಿ ನಡೆದಿದೆ. ಮೂಲತಃ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದ ನಿವಾಸಿಯಾಗಿರುವ ಜಗನ್ನಾಥ (54) ರಿಸರ್ವ್ ಪೊಲೀಸ್ನಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು.
ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳಿಂದ ಜಗನ್ನಾಥ ಕರ್ತವ್ಯಕ್ಕೆ ಗೈರು ಆಗಿದ್ದರು ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬೇಸತ್ತು ರಾತ್ರಿ ಎಲ್ಲರೂ ಮನೆಯಲ್ಲಿ ಮಲಗಿರುವಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಗಂಡನಿಗೆ ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದರು. ಅದರಂತೆ ಕಳೆದ ಒಂದೂವರೆ ತಿಂಗಳಿಂದ ಅವರು ಮನೆಯಲ್ಲೇ ಇದ್ದರು. ನಾವೆಲ್ಲರೂ ಮನೆಯಲ್ಲಿ ಮಲಗಿದ್ದೇವೆ.
ಬೆಳಗ್ಗೆ ನನ್ನ ಹಿರಿಯ ಮಗಳು ಕಾಲೇಜ್ ತೆರಳಲು ರೆಡಿಯಾಗಲು ತೆರಳಿದ್ದಾಳೆ. ಈ ವೇಳೆ 'ಅಪ್ಪ ನೇಣು ಬಿಗಿದುಕೊಂಡಿದ್ದಾರೆ, ಎದ್ದೇಳೆಮ್ಮ’ ಎಂದು ಹೇಳಿದಾಗ ನಮಗೆ ಈ ವಿಷಯ ತಿಳಿಯಿತು ಎಂದು ಮೃತ ಅಧಿಕಾರಿ ಪತ್ನಿ ಶೋಭಾ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.