ಹಾವೇರಿ: ಜಿಲ್ಲಾಡಳಿತ ವತಿಯಿಂದ ಕೊರೊನಾ ಸೋಂಕಿತರಿರುವ ಏರಿಯಾವನ್ನು ಸರಿಯಾಗಿ ಸೀಲ್ಡೌನ್ ಮಾಡಿಲ್ಲ ಎಂದು ಆರೋಪಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ತಮ್ಮ ಏರಿಯಾಗೆ ಮುಳ್ಳಿನ ಬೇಲಿ ಹಾಕಿಕೊಂಡಿರುವ ಘಟನೆ ತಾಲೂಕಿನ ಗುತ್ತಲದಲ್ಲಿ ನಡೆದಿದೆ.
ಗುತ್ತಲ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಗಳು ಈ ರೀತಿ ಮುಳ್ಳಿನ ಬೇಲಿ ಹಾಕಿಕೊಂಡಿದ್ದಾರೆ. ಸೋಮವಾರದಂದು ಅಂಬೇಡ್ಕರ ನಗರದ ಪಕ್ಕದಲ್ಲಿರುವ ವಾಲ್ಮಿಕಿ ನಗರದಲ್ಲಿ ಓರ್ವ ಬಾಲಕನಿಗೆ ಸೋಂಕಿರುವುದು ಪತ್ತೆಯಾಗಿತ್ತು. ಜಿಲ್ಲಾಡಳಿತ ಸೀಲ್ಡೌನ್ ಸೇರಿದಂತೆ ಬಫರ್ ವಲಯ ಎಂದು ಗುರುತಿಸಿ ಬ್ಯಾರಿಕೇಡ್ ಹಾಕಿತ್ತು. ಆದರೆ ಇದರಿಂದ ಸಮಾಧನಾಗೊಳ್ಳದ ಅಂಬೇಡ್ಕರ ನಗರ ನಿವಾಸಿಗಳು, ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.
ಅಲ್ಲದೆ ತಮ್ಮ ನಗರ ಸಂಪರ್ಕಿಸುವ ರಸ್ತೆಯಲ್ಲಿ ಮುಳ್ಳುಗಿಡಗಳನ್ನು ಹಾಕಿ ತಾವೇ ಸ್ವಯಂದಿಗ್ಬಂಧನ ಹಾಕಿಕೊಂಡಿದ್ದಾರೆ. ಈ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.