ಹಾವೇರಿ: ಇದು ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ಕಿಕ್ಕಿರಿದಿದ್ದ ಶಾಲೆ, ದಿನ ಕಳೆದಂತೆ ಆಕರ್ಷಣೆ ಕಳೆದುಕೊಂಡಿತ್ತು.
ಇದನ್ನು ಮನಗಂಡ ಶಾಲೆಯ ಮುಖ್ಯಶಿಕ್ಷಕರು ಮಕ್ಕಳ ಸಮಸ್ಯೆಯನ್ನು ಆಲಿಸಿದರು. ಶಾಲೆಗೆ ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬರ್ತಿಲ್ಲ ಅನ್ನೋದು ತಿಳಿಯಿತು. ಆಗ ತಾವೇ ಬ್ಯಾಂಕ್‌ನಲ್ಲಿ ಸಾಲ ತೆಗೆದು ಬಸ್ ಖರೀದಿಸಿದ್ರು. ವಿದ್ಯಾರ್ಥಿಗಳಿಗೆ ಪಿಕ್ಅಪ್, ಡ್ರಾಪ್ ವ್ಯವಸ್ಥೆ ಮಾಡಲಾಯಿತು. ಬಸ್ ವ್ಯವಸ್ಥೆ ನಂತರ ಶಾಲೆಯಲ್ಲಿ ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.
ಮುಖ್ಯಶಿಕ್ಷಕರ ಈ ಕಾರ್ಯಕ್ಕೆ ವಿದ್ಯಾರ್ಥಿಗಳ ಪೋಷಕರು ಸಹ ಕೈಜೋಡಿಸಿದ್ದಾರೆ. ಜೊತೆಗೆ ಶಾಲೆಯ ಹಳೆ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ಬಸ್‌ಗೆ ಬೇಕಾಗುವ ಇಂಧನ, ಚಾಲಕನ ವೇತನವನ್ನ ಅವರೇ ಭರಿಸುತ್ತಿದ್ದಾರಂತೆ. ಸರ್ಕಾರಿ ಶಾಲೆಗೂ ಖಾಸಗಿ ಶಾಲೆಯಂತೆ ಬಸ್ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದ ಪೋಷಕರು, ಮತ್ತೆ ತಮ್ಮ ಮಕ್ಕಳನ್ನು ಹೈಟೆಕ್ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ.
ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಶಾಲೆಗೆ ಹೋಗುತ್ತಿದ್ದಾರೆ. ಇದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ದುಬಾರಿ ಡೊನೇಷನ್ ಕಟ್ಟುವುದು ತಪ್ಪಿದೆ. ಪಕ್ಕದ ಆಂಧ್ರಪ್ರದೇಶ ರಾಜ್ಯದಲ್ಲಿ ಇದೇ ರೀತಿ ಸರ್ಕಾರಿ ಶಾಲೆಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲೂ ಇಂಥ ಯೋಜನೆ ಜಾರಿಗೆ ತಂದರೆ ಮಕ್ಕಳಿಲ್ಲದೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಬಹುದಾಗಿದೆ.