ರಾಣೆಬೆನ್ನೂರು(ಹಾವೇರಿ): ಕೊರೊನಾ ವೈರಸ್ ಬಗ್ಗೆ ಜಾಗೃತಿ ಹಾಗೂ ತಡೆಗಟ್ಟುವ ಬದಲು ಶಾಸಕರು ಕೊರೊನಾದಲ್ಲಿ ಸಹ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಲ್ಪಿ ವಿಡಿಯೋ ಮೂಲಕ ಮಾತನಾಡಿದ ಅವರು, ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಾದ ಸಮಯದಲ್ಲಿ ಶಾಸಕರು ಅಧಿಕಾರಿಗಳಿಗೆ ಒತ್ತಡ ಹಾಕಿ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳನ್ನು ಬಿಡುಗಡೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಜು.17 ರಂದು ನಗರದಲ್ಲಿ 36 ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿವೆ. ಈ ಕೊರೊನಾ ವರದಿ ಬರುವುದಕ್ಕಿಂತ ಮುನ್ನ ಕ್ವಾರಂಟೈನ್ನಲ್ಲಿದ್ದ ಸೋಂಕಿತರನ್ನು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಗೊಳಿಸಲಾಗಿದೆ. ನಂತರ ವರದಿ ಬಂದಾಗ ಮತ್ತೆ ಸಂಜೆ ಎಲ್ಲರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಸಮಯದಲ್ಲಿ ಅವಧಿ ಮುನ್ನ ಕ್ವಾರಂಟೈನ್ ಮೊಟಕುಗೊಳಿಸಿದ್ದರಿಂದ ಸೋಂಕಿತರು ರಾಣೆಬೆನ್ನೂರು ನಗರದ ತುಂಬಾ ಓಡಾಡುತ್ತಿದ್ದಾರೆ. ಇದರಿಂದ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಮಾಡುವುದಕ್ಕೆ ನಮ್ಮಿಂದ ಯಾವುದೇ ಅಡ್ಡಿಯಿಲ್ಲ. ಆದರೆ ಬಡವರ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸೂಕ್ತ ಸಹಾಯ ನೀಡಿದ ನಂತರ ಮಾಡುವುದು ಒಳಿತು. ಇದನ್ನು ಬಿಟ್ಟು ಅವೈಜ್ಞಾನಿಕ ಲಾಕ್ಡೌನ್ ರಾಣೆಬೆನ್ನೂರು ನಗರಕ್ಕೆ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.