ಹಾವೇರಿ : ಕೋವಿಡ್ ಸೋಂಕಿತರ ಹೆಣದ ಮೇಲೆ ಹಣ ಮಾಡಿದ ಸರ್ಕಾರ ಇದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ನಿರ್ಜೀವ ಸರ್ಕಾರ. ಯಡಿಯೂರಪ್ಪನವರ ಸಚಿವ ಸಂಪುಟದವರೇ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತಹ ಸಚಿವರನ್ನು ತೆಗೆದುಹಾಕಲು ಸಾಧ್ಯವಾಗದಷ್ಟು ಯಡಿಯೂರಪ್ಪ ದುರ್ಬಲರಾಗಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ಬಿಜೆಪಿ ನಾಯಕರು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಕೋವಿಡ್ ಮೂರನೇ ಅಲೆ ತಡೆಗಟ್ಟಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಕೋವಿಡ್ನಿಂದ ಜನ ಸಂಕಷ್ಟದಲ್ಲಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಇದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ರಾಜಕೀಯ ಚರ್ಚೆ ಮಾಡುತ್ತಿದ್ದರು. ಬಿಜೆಪಿ ನಾಯಕರಿಗೆ ಜನರ ಪ್ರಾಣಕ್ಕಿಂತ ರಾಜಕೀಯ ಮುಖ್ಯವಾಯಿತಾ ಎಂದು ಪ್ರಶ್ನಿಸಿದರು.
ಓದಿ : ನಾವು ಸಿಎಂ ಪರವಾಗಿದ್ದೇವೆ: ನಿರಾಣಿ
ಕೋವಿಡ್ ಮೊದಲನೇ ಅಲೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದರು. ಎರಡನೇ ಅಲೆಯ ಸಂದರ್ಭ 23 ಸಾವಿರ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾವ ರಾಜ್ಯಕ್ಕೆ ಎಷ್ಟು ನೀಡಿದ್ದಾರೆ ಎಂಬುದನ್ನು ಪ್ರಧಾನಿಯವರು ತಿಳಿಸಬೇಕು. ಪಿಎಂ ಕೇರ್ ಫಂಡ್ಗೆ ಬಂದ ಹಣ ಬಗ್ಗೆ ಲೆಕ್ಕ ಕೊಡಬೇಕು ಎಂದರು.