ಹಾವೇರಿ: ನಗರದಲ್ಲಿ ಮೂರು ವರ್ಷದ ಪುಟ್ಟ ಬಾಲಕಿಯೊಬ್ಬಳು ಸಾಮಾನ್ಯ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಉತ್ತರಿಸುವ ಮೂಲಕ ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದ್ದಾಳೆ. ಅಲ್ಲದೇ, ಇಂಡಿಯನ್ ಬುಕ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ 21, ಕರ್ನಾಟಕ ಅಚೀವರ್ಸ್ ರೆಕಾರ್ಡ್ ಮಾಡಿರುವ ಬಾಲೆ ಗಿನ್ನಿಸ್ ಪುಸ್ತಕದಲ್ಲಿ ಹೆಸರು ದಾಖಲಿಸಲು ಪ್ರಯತ್ನ ನಡೆಸಿದ್ದಾಳೆ.
ಈ ರೀತಿ ಪಟಾಫಟ್ ಉತ್ತರ ಹೇಳುವ ಈ ಬಾಲೆಯ ಹೆಸರು ಶ್ರೀಲಕ್ಷ್ಮಿ. ಹಾವೇರಿಯ ಬಸವೇಶ್ವರನಗರದ ಪ್ರೀಯಾ ಮತ್ತು ಪ್ರವೀಣ ದಂಪತಿ ಮುದ್ದಾದ ಮಗಳು. ಅದ್ಭುತವಾದ ಐಕ್ಯೂ ಹೊಂದಿರುವ ಮೂರು ವರ್ಷದ ಈ ಬಾಲಕಿ ಈಗಾಗಲೇ ಮೂರು ದಾಖಲೆಗಳಲ್ಲಿ ಸೇರ್ಪಡೆಯಾಗಿದ್ದಾಳೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು. ರಾಜ್ಯ ರಾಜಧಾನಿಗಳ ಹೆಸರು, ಸಾಮಾನ್ಯ ಜ್ಞಾನ ಸೇರಿದಂತೆ ಹಲವು ಪ್ರಶ್ನೆಗಳಿಗೆ ನೀರು ಕುಡಿದಷ್ಟು ಸಲೀಸಾಗಿ ಶ್ರೀಲಕ್ಷ್ಮೀ ಉತ್ತರಿಸುತ್ತಾಳೆ. ಅದಕ್ಕಾಗಿಯೇ ಇಂಡಿಯನ್ ಬುಕ್ ರಿಕಾರ್ಡ್ಸ್, ಇಂಡಿಯಾ ಬುಕ್ ಆಫ್ 21 ಮತ್ತು ಕರ್ನಾಟಕ ಅಚೀವರ್ಸ್ ಪುಸ್ತಕದಲ್ಲಿ ತನ್ನ ಹೆಸರನ್ನು ಶ್ರೀಲಕ್ಷ್ಮಿ ಅಚ್ಚಾಗಿಸಿದ್ದಾಳೆ. ಸದ್ಯ ಅಂತಾರಾಷ್ಟ್ರೀಯ ಪುಸ್ತಕದಲ್ಲಿ ದಾಖಲೆ ಮಾಡಲು ಬಾಲಕಿ ಸಿದ್ಧಳಾಗುತ್ತಿದ್ದಾಳೆ.
ಶ್ರೀಲಕ್ಷ್ಮಿಯ ನೆನಪಿನ ಶಕ್ತಿಗೆ ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ. ತಂದೆ ಪ್ರವೀಣ ಅರವಳಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಪ್ರಿಯಾ ಉಪನ್ಯಾಸಕಿಯಾಗಿದ್ದಾರೆ. ಬಿಡುವಿನ ಸಮಯದಲ್ಲಿ ತಮ್ಮ ಮಗಳಿಗೆ ಪೋಷಕರು ತರಬೇತಿ ನೀಡುತ್ತಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ಮೋಡಿ ಮಾಡುತ್ತಿರುವ ಬಾಲಕಿ ಇದೀಗ ಗಿನ್ನಿಸ್ ಬುಕ್ ಸೇರಿ ಅಂತಾರಾಷ್ಟ್ರೀಯ ಪ್ರಶಸ್ತಿಗಳತ್ತ ಮುಖ ಮಾಡಿದ್ದಾಳೆ. ಆದಷ್ಟು ಬೇಗ ಅವಳ ಹೆಸರು ಅಂತಾರಾಷ್ಟ್ರೀಯ ದಾಖಲೆಗಳಲ್ಲಿ ಸೇರ್ಪಡೆಯಾಗಲಿ ಎನ್ನುವುದು ನಮ್ಮ ಆಶಯ.