ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದ ದುರ್ಗಮ್ಮದೇವಿ ಮಾರುಕಟ್ಟೆಗೆ ಭಾನುವಾರ ರಾತ್ರಿ ಬೆಂಕಿ ಬಿದ್ದಿದ್ದು, ಸುಮಾರು 100 ಅಂಗಡಿಗಳು ಸುಟ್ಟು ಕರಕಲಾಗಿವೆ. ಒಂದು ವಾರದ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಹಣ್ಣು, ತರಕಾರಿ, ಸೇರಿ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿವೆ. ಬಡ ವರ್ಗದವರೇ ಹೆಚ್ಚು ವ್ಯಾಪಾರಸ್ಥರಿರುವ ಈ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡು, ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.
ಕೊರೊನಾ, ಲಾಕ್ಡೌನ್ ಬಳಿಕ ವ್ಯಾಪಾರ ಆರಂಭಿಸಿದವರಿಗೆ ಈ ಘಟನೆ ಸಿಡಿಲು ಬಡಿದಂತಾಗಿದೆ. ಸರ್ಕಾರ, ಜನ ಪ್ರತಿನಿಧಿಗಳು ತಮ್ಮ ಹಾನಿಗೆ ಸ್ಪಂದಿಸಬೇಕು, ಇಲ್ಲದಿದ್ದರೆ ನಮ್ಮ ಬದುಕು ಬೀದಿಗೆ ಬರುತ್ತದೆ ಎಂಬ ಆತಂಕವನ್ನು ವ್ಯಾಪಾರಿಗಳು ವ್ಯಕ್ತಪಡಿಸಿದರು.
ಇದನ್ನೂ ಓದಿ: ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಸಂಗ್ರಹವಾಯ್ತು 60,08,007 ರೂ. ಭಕ್ತರ ಹುಂಡಿ ಹಣ
ಬೆಂಕಿ ಬಿದ್ದ ಘಟನೆ ತಿಳಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಅಂಗಡಿಗಳು ಸುಟ್ಟು ಕರಕಲಾಗಿದ್ದವು. ಇನ್ನೂ ಘಟನೆಯಿಂದ ಕಂಗೆಟ್ಟ ಜೀವಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಾಯಕ್ಕೆ ಬರುವಂತೆ ಮನವಿ ಮಾಡಿದರು.
ಈ ಮಧ್ಯೆ ಘಟನೆ ಬಗ್ಗೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ಇದರ ಹಿಂದೆ ದುಷ್ಕರ್ಮಿಗಳ ಕೈವಾಡವಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಸರ್ಕಾರ ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಮತ್ತು ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.