ಹಾವೇರಿ : ರಟ್ಟೀಹಳ್ಳಿ ತಾಲೂಕಿನಲ್ಲಿ ಬರುವ ಮದಗಮಾಸೂರು ಕೆರೆಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಬಾಗಿನ ಅರ್ಪಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಹಂಕಾರ, ದಬ್ಬಾಳಿಕೆ, ಅಕ್ರಮ ಹಣದಿಂದ ಅಧಿಕಾರ ಪಡೆದಿದ್ದಾರೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೆ ಕುಡಿ. ಪ್ರಾಮಾಣಿಕತೆಗೆ ಹೆಸರಾದವರು ಅಂದ್ರೇ ಅದು ಕುಮಾರಸ್ವಾಮಿ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ನಾಮಿನೇಶನ್ ಕೊಟ್ಟ ಮೇಲೆ ಕ್ಷೇತ್ರಕ್ಕೆ ಹೋಗುವುದಿಲ್ಲ. ಜನರು ಅವರನ್ನ ಆಯ್ಕೆ ಮಾಡ್ತಾರೆ. ಅವರು ಯಾವುದೇ ಒಂದು ಪೈಸೆ ಖರ್ಚು ಮಾಡಲ್ಲ. ಅವರಂಥಾ ಪ್ರಾಮಾಣಿಕ ವ್ಯಕ್ತಿಯನ್ನ ನಾನು ಇದುವರೆಗೆ ಜೀವನದಲ್ಲಿ ನೋಡಿಯೇ ಇಲ್ಲ. ಅವರಿಗೆ ಮುಖ್ಯಮಂತ್ರಿ ಸ್ಥಾನ ಹೋದ ನಂತರ ಮೀನನ್ನು ಹೊರಗೆ ಹಾಕಿದಂತಾಗಿದೆ. ಅವರು ದುರಹಂಕಾರದಿಂದ, ಸ್ವೇಚ್ಛಾಚಾರದಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಬೇರೆ ಯಾರೂ ಅವರ ಮುಖ್ಯಮಂತ್ರಿ ಸ್ಥಾನ ಕಳೆದಿಲ್ಲ. ಅವರಲ್ಲಿರುವ ಸ್ವಾರ್ಥ ಭಾವನೆ, ಎರಡು ಜಿಲ್ಲೆಗೆ ಸೀಮಿತವಾದ ರಾಜ್ಯದ ಆಡಳಿತ ಇತ್ತು. ಹೀಗಾಗಿ, ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತಾ ಕೆಳಗಿಳಿಸಿದ್ದೇವೆ ಎಂದರು.
ನಾನು ಸಿಎಂ ಆಗಿದ್ದಾಗ ಕೊಟ್ಟ ಅನುದಾನದಲ್ಲೇ ಹಿರೇಕೆರೂರಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹಿರೇಕೆರೂರಲ್ಲಿ ಅಭಿವೃದ್ಧಿ ನೋಡಬೇಕು ಅಂದ್ರೆ ನಮಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಿಲ್ಲ. ನಮಗೆ ಜನತೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ದೇವೇಗೌಡರ ಕಾಲದಲ್ಲಿ ಕೊಟ್ಟಿದ್ದರಲ್ಲೇ ನಾವಿನ್ನೂ ಅಭಿವೃದ್ಧಿ ಮಾಡ್ತಿದ್ದೇವೆ ಎಂದು ಲೇವಡಿ ಮಾಡಿದರು.
ಅಧಿಕಾರ ಯಾರ ಮನೆಯ ಸ್ವತ್ತಲ್ಲ. ಅಧಿಕಾರ ನಮ್ಮ ಮನೆ ಸ್ವತ್ತು ಅಂತಾ ಯಾವ ಮೂರ್ಖನೂ ಹೇಳಲ್ಲ. ಯಾವ ಜನ ಯಾವ ಸರ್ಕಾರದ ಮೇಲೆ ಆಶೀರ್ವಾದ ಮಾಡ್ತಾರೆ, ಅಲ್ಲಿವರೆಗೂ ಆ ಸರ್ಕಾರ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರೀತಿ ಯಾವ ಸರ್ಕಾರದ ಮೇಲಿರುತ್ತೋ ಅಲ್ಲಿಯವರೆಗೂ ಆ ಸರ್ಕಾರ ಇರುತ್ತದೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ ಎಂದು ಹೇಳಿದರು.
ಓದಿ: ವಿಘ್ನ ನಿವಾರಕನ ಹಬ್ಬಕ್ಕೇ ನೂರೆಂಟು ವಿಘ್ನ.. ಬಾಗಲಕೋಟೆ ಮೂರ್ತಿ ತಯಾರಕರ ದುಡಿಮೆ ಭಗ್ನ..