ಸಕಲೇಶಪುರ(ಹಾಸನ): ರಾಷ್ಟ್ರೀಯ ಹೆದ್ದಾರಿ 75 ಹಾಸನ-ಸಕಲೇಶಪುರ ನಡುವಿನ ರಸ್ತೆ ಕಾಮಗಾರಿ 2022ರಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ತಿಳಿದರು.
ತಾಲೂಕಿನ ವಿವಿಧ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪಟ್ಟಣದ ತಾ. ಪಂ. ಸಭಾಂಗಣದಲ್ಲಿ ಗುರುವಾರ ಸಂಜೆ ಸಭೆ ನಡೆಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ 75 ಹಾಸನ-ಸಕಲೇಶಪುರ ನಡುವಿನ ಕಾಮಗಾರಿ ಗುತ್ತಿಗೆ ಪಡೆದಿದ್ದ ಐಸೋಲೆಕ್ಸ್ ಕಂಪನಿ ದಿವಾಳಿಯಾಗಿದ್ದರಿಂದ ರಾಜ್ ಕಮಲ್ ಎಂಬ ಕಂಪನಿಗೆ ಉಪಗುತ್ತಿಗೆ ನೀಡಲಾಗಿದೆ. ಇಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ. ಗುತ್ತಿಗೆಯ ತಾಂತ್ರಿಕ ದೋಷದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.
ಅಧಿಕಾರಿಗಳು ಬರುವ ಅಕ್ಟೋಬರ್ 15 ರಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಲಿದ್ದಾರೆ. ಈಗಿರುವ ಗುಂಡಿ ಬಿದ್ದಿರುವ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಮಾಹಿತಿ ನನಗೆ ಬಂದಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಪೋಲಿಸರು ಎಚ್ಚರವಹಿಸಬೇಕು ಎಂದು ಹೇಳಿದರು.
ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆಗಬೇಕೆಂಬುದು ನಮ್ಮ ಆಶಯವಾಗಿದ್ದು, ಕೆಲವೊಂದು ಕಾನೂನಿನ ತೊಂದರೆಗಳಿಂದ ಕಾಮಗಾರಿ ತಡವಾಗಿದೆ. ನ್ಯಾಯಾಲಯದಲ್ಲಿ ದಾವೆ ಹೂಡಿರುವವರ ನ್ಯಾಯ ಸಮ್ಮತ ಬೇಡಿಕೆ ಈಡೇರಿಸಿ ಕಾಮಗಾರಿ ಮುಗಿಸಲು ಅಧಿಕಾರಿಗಳು ಮುಂದಾಗಬೇಕು.
ಕಾಡಾನೆ ಸಮಸ್ಯೆ ಬಗೆಹರಿಸಲು ಆನೆ ಕಾರಿಡಾರ್ ಯೋಜನೆಗೆ ಪಶ್ಚಿಮಘಟ್ಟದ ತಪ್ಪಲಿನ ಕೆಲವು ಗ್ರಾಮಗಳ ಗ್ರಾಮಸ್ಥರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಆದರೆ, ಅವರುಗಳು ಎತ್ತಿನಹೊಳೆ ಯೋಜನೆಗೆ ನೀಡಿದ ಪರಿಹಾರದ ನಿರೀಕ್ಷೆ ಹೊಂದಿದ್ದಾರೆ. ಈ ರೀತಿಯ ಬೇಡಿಕೆ ಈಡೇರಿಸಲು ಕಷ್ಟಕರವಾಗುತ್ತದೆ. ಯೋಜನೆ ಕುರಿತು ಅಧಿಕಾರಿಗಳು ಸಮೀಕ್ಷೆ ಮಾಡುತ್ತಿದ್ದಾರೆ ಎಂದರು.
ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಸರ್ಕಾರ ಕಾಫಿ ಬೆಳೆಗಾರರಿಗೆ ಕೇವಲ 2 ಹೆಕ್ಟೇರ್ ಗಳಿಗೆ ಮಾತ್ರ ಪರಿಹಾರ ನೀಡುವ ಪದ್ದತಿಯನ್ನು ಬದಲಾಯಿಸಿ ಬೆಳೆಗಾರರ ಸಂಪೂರ್ಣ ಭೂಮಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದರು.