ಹಾಸನ: ಬಂಟೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದಿಗೆರೆ ಶುಂಠಿ ಶುದ್ಧೀಕರಣ ಘಟಕದಲ್ಲಿ ಶುಂಠಿ ತೊಳೆದ ನೀರಿನಿಂದ ಕೆರೆ ಕಲುಷಿತವಾಗಿದೆ ಎಂಬ ವರದಿ ಈಟಿವಿ ಭಾರತ್ನಲ್ಲಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿದ್ರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಶುಂಠಿ ತೊಳೆದ ನೀರು ಹರಿದು ಕೆರೆ ಕಲುಷಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಬಂಟೇನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ರಾಜಶೇಖರ್ರೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಶುಂಠಿ ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಗ್ರಾಮ ಪಂಚಾಯತ್‌ನಿಂದ ಎರಡು ಬಾರಿ ನೋಟಿಸ್ ನೀಡಲಾಗಿದೆ.
ಈ ವ್ಯಕ್ತಿ ಕೆರೆಯನ್ನು ಕೂಡಾ ಒತ್ತುವರಿ ಮಾಡಿದ್ದು, ಮುಂದಿನ ಆದೇಶದವರೆಗೂ ಶುಂಠಿ ಶುದ್ಧೀಕರಣ ಘಟಕದಲ್ಲಿ ಶುಂಠಿ ತೊಳೆಯುವುದನ್ನ ಕೂಡಲೇ ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲದೇ, ಒಂದು ವಾರದಲ್ಲಿ ಕಲುಷಿತವಾಗಿರುವ ಕೆರೆಯನ್ನ ಶುಂಠಿ ಶುದ್ದೀಕರಣ ಘಟಕದ ಮಾಲೀಕರು ಅವರ ಸ್ವಂತ ಹಣದಿಂದ ಸ್ವಚ್ಛಗೊಳಿಸಬೇಕು. ಉದಾಸೀನ ತೋರಿದಲ್ಲಿ ತೀವ್ರ ತರಹದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.