ಹಾಸನ: ಚುನಾವಣೆ ಮುಗಿದು ಒಂದೂವರೆ ವರ್ಷ ಕಳೆದ್ರೂ ಇಲ್ಲಿನ ನಗರಸಭೆ ಸದಸ್ಯರು ಅಧಿಕಾರವಿಲ್ಲದೇ ಕೈಕಟ್ಟಿ ಕುಳಿತಿದ್ದಾರೆ. ಆದ್ರೆ ಕೆಲವೇ ದಿನಗಳಲ್ಲಿ ಯಾವುದಾದ್ರು ಒಂದು ಅಧಿಕಾರ ಸಿಗುತ್ತೆ ಅಂತ ಇವರು ಖುಷಿಯಾಗಿದ್ದಾರೆ.
ಹಾಸನ ನಗರಸಭೆಗೆ ಚುನಾವಣೆ ಮುಗಿದು ಒಂದೂವರೆ ವರ್ಷ ಕಳೆದಿದೆ. ಚುನಾವಣೆಯಲ್ಲಿ ಗೆದ್ದಿರೋ ಅಭ್ಯರ್ಥಿಗಳಿಗೆ ಅಧಿಕಾರ ಸಿಗದೇ ಗೆದ್ದರೂ ಸೋತಂತಾಗಿದ್ದಾರೆ. ಸದ್ಯ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ನಡೆಯಬಹುದೆಂಬ ನಿರೀಕ್ಷೆ ಮೂಡಿದೆ.
ಹೈಕೋರ್ಟ್ಗೆ ಮೊರೆ:
ಹಾಸನ, ಅರಸೀಕೆರೆ ನಗರಸಭೆ ಹಾಗೂ ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಸಕಲೇಶಪುರ ಪುರಸಭೆಗೆ 2018ರ ಸೆ.3 ರಂದು ಚುನಾವಣೆ ನಡೆದಿತ್ತು. ಮೀಸಲಾತಿ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ತಡೆ ಬಿದ್ದಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಸ್ಥಾನ ಭರ್ತಿಗೆ ಸಂಬಂಧಿಸಿದಂತೆ ಚರ್ಚೆಗಳು ಗರಿಗೆದರಿವೆ. ಹೆಚ್ಚು ಸದಸ್ಯತ್ವ ಬಲ ಹೊಂದಿರುವ ಪಕ್ಷದ ಯಾರಾದರೊಬ್ಬರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂಬುದು ಸಾಮಾನ್ಯ ಲೆಕ್ಕಾಚಾರ. ಆದ್ರೆ ಹಾಸನ ನಗರಸಭೆ ಮಾತ್ರ ಈ ವಿಚಾರದಲ್ಲಿ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಹೆಚ್ಚು ಸ್ಥಾನ ಗೆಲ್ಲದಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ತಂತ್ರ ಹೆಣೆದಿದೆ ಎನ್ನಲಾಗ್ತಿದೆ.
ತಂತ್ರ-ಪ್ರತಿತಂತ್ರ:
ಎಲ್ಲೆಲ್ಲಿ ಕಾಂಗ್ರೆಸ್-ಜೆಡಿಎಎಸ್ಗೆ ಅಧಿಕಾರ ತಪ್ಪಿಸುವ ಅವಕಾಶ ಇದೆಯೋ ಅದನ್ನು ಕಾರ್ಯಗತ ಮಾಡಲು ಕೆಸರಿಪಡೆ ಕಾರ್ಯ ತಂತ್ರ ರೂಪಿಸಿದೆ. ಈ ಮೂಲಕ ಪ್ರತಿಪಕ್ಷಗಳಿಗೆ ಆಘಾತ ನೀಡುವುದರ ಜೊತೆಗೆ ಪಕ್ಷ ಬಲವರ್ಧನೆಗೆ ಈಗಿನಿಂದಲೇ ತಂತ್ರ ಪ್ರತಿತಂತ್ರ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಹಾಸನ ಜಿ.ಪಂ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಪರಿಣಾಮ ಹೆಚ್ಚು ಸೀಟು ಗಳಿಸಿದರೂ ಜೆಡಿಎಸ್ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ನಗರಸಭೆಯಲ್ಲಿ ಅದೇ ದಾಳ ಉರುಳಿಸಲು ಬಿಜೆಪಿ ಯೋಚಿಸಿದೆ ಎನ್ನಲಾಗ್ತಿದೆ.
ನಗರಸಭೆಯ ಬಲಾಬಲ:
ಹಾಸನ ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಜೆಡಿಎಸ್ 17 ಸ್ಥಾನ, ಬಿಜೆಪಿ 13, ಕಾಂಗ್ರೆಸ್ 2 ಮತ್ತು 3 ಮಂದಿ ಪಕ್ಷೇತರರು ಜಯಗಳಿಸಿದ್ದಾರೆ. ಅಧಿಕಾರ ಹಿಡಿಯಲು 18 ಸ್ಥಾನ ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಇನ್ನೊಂದೇ ಸ್ಥಾನ ಸಾಕು. ಬಿಜೆಪಿಗೆ ಇನ್ನೂ 5 ಸದಸ್ಯರ ಬೆಂಬಲ ಬೇಕು. ಅದಕ್ಕಾಗಿ ಸ್ಥಳೀಯ ಮಟ್ಟದಲ್ಲೂ ಆಪರೇಷನ್ ಕಮಲ ನಡೆದರೆ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ನಗರಸಭೆಯ ಅಧಿಕಾರವನ್ನ ಹಿಡಿಯಲು ಜೆಡಿಎಸ್-ಕಾಂಗ್ರೆಸ್ನಲ್ಲಿ ಜಟಾಪಟಿ ನಡೆಯುತ್ತಿದ್ದು, ಜೆಡಿಎಸ್ ಯಾವುದೇ ಗುಟ್ಟು ಬಿಟ್ಟುಕೊಡದೇ ಸೈಲೈಟಾಂಗಿ ತಂತ್ರ ರೂಪಿಸಿದ್ರೆ, ಬಿಜೆಪಿಗರು ನಾವೇ ಅಧಿಕಾರಿ ಹಿಡಿಯೋದು ಇದ್ರಲ್ಲಿ ಯಾವುದೇ ಅನುಮಾನಬೇಡ. ಗಣಿತ ಲೆಕ್ಕ ಬರುವವರಿಗೆ ಅಧಿಕಾರದ ಲೆಕ್ಕ ಗೊತ್ತಾಗಲ್ವಾ ಅಂತ ವ್ಯಂಗ್ಯವಾಡುತ್ತಿದ್ದಾರೆ. ಮುಂದೇನಾಗುತ್ತೆ ಎಂಬುದನ್ನ ಕಾದು ನೋಡಬೇಕಿದೆ.