ಹಾಸನ: ತಾಲೂಕಿನ ಅತ್ನಿ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಎ.ಟಿ.ರಾಮಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು.
ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಇದೇ ಗ್ರಾಮದ ದಲಿತ ಕಾಲೋನಿಯ ಅಭಿವೃದ್ಧಿಗಾಗಿ ಎಸ್‌ಇಪಿ ಯೋಜನೆಯಡಿ ರೂ 30 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು. ಹರದೂರು ಗ್ರಾಮದಲ್ಲಿ 90 ಲಕ್ಷ ರೂ, ಹರದೂರು ಪುರ ಗ್ರಾಮದಲ್ಲಿ 90 ಲಕ್ಷ ರೂ ಹಾಗೂ ಅಣ್ಣಿಗನಹಳ್ಳಿ ಗ್ರಾಮದಲ್ಲಿ 70 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ಎಸ್‌ಎಚ್‌ಡಿಪಿ ಯೋಜನೆಯಲ್ಲಿ ಶಂಕನಹಳ್ಳಿಯಿಂದ ಗೊರೂರುವರೆಗೆ 17.75 ಕೋಟಿ ರೂ ವೆಚ್ಚದ ದ್ವಿಪಥ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದು ಮಂಜೂರಾತಿ ದೊರೆತಿದೆ. 18 ಕೋಟಿ ರೂ ವೆಚ್ಚದಲ್ಲಿ ಮಲ್ಲಿಪಟ್ಟಣದಿಂದ ಕೊಣನೂರು ಮಾರ್ಗದ 20 ಕಿ.ಮೀ ರಸ್ತೆ, ಸಂತೆಮರೂರು, ಜೋಡಿಗುಬ್ಬಿ, ಕಳ್ಳಿ ಮುದ್ದನಹಳ್ಳಿ, ಬಸವಾಪಟ್ಟಣ ಮಾರ್ಗದ ರಸ್ತೆ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ ಎಂದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಸದಸ್ಯೆ ರಾಧಮ್ಮ, ತಾಲೂಕು ಪಂಚಾಯಿತಿ ಸದಸ್ಯ ಮರೀಗೌಡ, ಬಿಎಸ್ಪಿ ಮುಖಂಡ ಅತ್ನಿ ಹರೀಷ್, ಮುಖಂಡ ಕಳ್ಳಿಮುದ್ದನಹಳ್ಳಿ ಲೋಕೇಶ್, ನಿರಾವರಿ ಇಲಾಖೆ ಎಂಜಿನಿಯರ್‌ಗಳಾದ ಮಹಾದೇವ ಪ್ರಸಾದ್, ಸುಧಾಕರ್, ಪುನೀತ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.