ಹಾಸನ : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚಿ ಹಾಕುವುದಿಲ್ಲ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲವೆಂದು ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದರು.
ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ರಾಜಕಾರಣಿಗಳಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ಅಥವಾ ಬೇರೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸೂಚಿಸಿದ್ದಾರೆ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲೂ ಕೇಳಿ ಬಂದಿರುವ ಅಕ್ರಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ವಿಚಾರ ಮುಖ್ಯಮಂತ್ರಿಗಳ ಗಮನದಲ್ಲೂ ಇದೆ. ಈ ಬಗ್ಗೆ ಅವರೇ ಕ್ರಮಕೈಗೊಳ್ಳಲಿದ್ದಾರೆ.
ಆದರೆ, ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥ್ ನಾರಾಯಣ ಅವರು ಹಗರಣದಲ್ಲಿ ಭಾಗಿಯಾಗಿಲ್ಲ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಏಳಿಗೆ ಸಹಿಸದೇ ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದು ಪಕ್ಕಾ: ಪ್ರಿಯಾಂಕ್ ಖರ್ಗೆ
ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದನ್ನು ನಿರ್ಣಯಿಸುವುದು ಮತದಾರರು ಮಾತ್ರ. ರಾಜಕೀಯ ನಾಯಕರು ಏನೇ ಹೇಳಿದರೂ ಅಂತಿಮ ತೀರ್ಪು ಮತದಾರನ ಕೈಯಲ್ಲಿ ಇರುತ್ತದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟರು.