ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಅಂತರ್ಜಲ ನಿರ್ದೇಶನಾಲಯ ಇವರ ವತಿಯಿಂದ ಏರ್ಪಡಿಸಿದ್ದ ಅಟಲ್ ಭೂ ಜಲ ಯೋಜನೆ ಅನುಷ್ಠಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟನೆ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ಶಾಸಕ ಶಿವಲಿಂಗೇಗೌಡ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಸಣ್ಣ-ಸಣ್ಣ ಜಮೀನಿನಲ್ಲಿ ಸೌರ ವಿದ್ಯುತ್ ಪ್ಯಾನಲ್ಗಳನ್ನು ಅಳವಡಿಸಿ, ಅದರಿಂದ ವಿದ್ಯುಚ್ಛಕ್ತಿ ಉತ್ಪಾದಿಸುವ ಉದ್ದೇಶ ಸರ್ಕಾರಕ್ಕಿದೆ. ಅಟಲ್ ಭೂ, ಜಲ ಯೋಜನೆಯಡಿಯಲ್ಲಿ ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಹಾಗೂ ಕರ್ನಾಟಕ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕು ವ್ಯಾಪ್ತಿಗೊಳಪಡುವ 1,199 ಗ್ರಾಮ ಪಂಚಾಯಿತಿ ವ್ಯಾಪ್ತಿಯ 39,703 ಚ.ಕಿ.ಮೀ ವಿಸ್ತಾರವಾದ ಪ್ರದೇಶವನ್ನು ಈ ಕಾರ್ಯಕ್ರಮದಡಿಯಲ್ಲಿ ಗುರುತಿಸಲಾಗಿದೆ ಎಂದರು.
ಯೋಜನೆಯ ಅಂದಾಜು ವೆಚ್ಚ 6000 ಕೋಟಿ ರೂ.ಗಳಾಗಿದ್ದು, ಇದರಲ್ಲಿ 3000 ಕೋಟಿ ರೂ. ಭಾರತ ಸರ್ಕಾರದಿಂದ ಮತ್ತು 3000 ಕೋಟಿ ರೂ. ವಿಶ್ವ ಬ್ಯಾಂಕ್ನಿಂದ ಭಾರತ ಸರ್ಕಾರಕ್ಕೆ ಸಾಲದ ರೂಪದಲ್ಲಿ ವಿನಿಯೋಗಿಸಲಾಗಿದೆ. ಅಟಲ್ ಭೂ-ಜಲ ಯೋಜನೆಯಡಿಯಲ್ಲಿ 41 ತಾಲ್ಲೂಕುಗಳಲ್ಲಿ ಅಂತರ್ಜಲ ಸಂಪನ್ಮೂಲ ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಲಾಗಿದ್ದು, ಈ ಗುರಿಯನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯಮಾಡುವ ಜೊತೆಗೆ ಅಂತರ್ಜಲ ಸಂರಕ್ಷಣೆ ಅತ್ಯಂತ ತುರ್ತು ಆಧ್ಯತೆಯ ಹೊಣೆಗಾರಿಕೆಯಾಗಿದ್ದು, ಪ್ರತಿಯೊಬ್ಬರು ಇದರಲ್ಲಿ ತೊಡಗುವ ಮೂಲಕ ಭೂಮಿಯ ಉಳಿವಿಗೆ ಕೈಜೋಡಿಸಬೇಕು ಎಂದರು.
ಬಳಿಕ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಬರಗಾಲದಿಂದ ಸಾಲದ ಶೂಲಕ್ಕೆ ಸಿಲುಕಿ ಕಂಗಾಲಾಗಿದ್ದು, ಅರಸೀಕೆರೆ ತಾಲ್ಲೂಕಿನಂತೆ ಬೇಲೂರು ಕ್ಷೇತ್ರ ವ್ಯಾಪ್ತಿಯ ಹಳೆಬೀಡು, ಕಸಬಾ ಮತ್ತು ಜಾವಗಲ್ ಹೋಬಳಿಗಳು ಬರಪೀಡಿತವಾಗಿದ್ದು ಅಲ್ಲಿನ ಕೆರೆಗಳನ್ನು ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಸೇರಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದ್ರು. ಇನ್ನು ಈ ಭಾಗದಲ್ಲಿ 1200ಕ್ಕೂ ಅಧಿಕ ಅಡಿ ಅಂತರ್ಜಲ ಕುಸಿದಿದೆ. ಹೀಗಾಗಿ ಕೆರೆಕಟ್ಟೆಗಳು ಬತ್ತಿವೆ. ಅಡಿಕೆ, ತೆಂಗು, ನಾಶವಾಗಿದ್ದು, ಭೂಜಲ ಭತ್ತುತ್ತಿರುವುದು ವಿಷಾಧನೀಯ ಎಂದರು.
ಇನ್ನು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಎತ್ತಿನ ಹೊಳೆ ಯೋಜನೆಯಡಿ ಅರಸೀಕೆರೆ ತಾಲ್ಲೂಕಿನ 34, ಬೇಲೂರು ತಾಲ್ಲೂಕಿನ 6 ಕೆರೆಗಳ ದುರಸ್ತಿ, ಅಭಿವೃದ್ಧಿಗೆ 15 ಕೋಟಿ ರೂ. ಮೀಸಲು ಇರಿಸಿದ್ದು ಸಣ್ಣ ನೀರಾವರಿ ಇಲಾಖೆ ಮೂಲಕ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಿ ಎಂದು ಮಾಧುಸ್ವಾಮಿಗೆ ಮನವಿ ಮಾಡಿದರು. ವಿವಿಧ ನದಿಗಳ ಜಲ ಮೂಲಗಳ ಸಮರ್ಪಕ ಬಳಕೆ ಮಾಡಿ ಬರ ಇರುವ ತಾಲ್ಲೂಕುಗಳಿಗೆ ನೀರು ಒದಗಿಸಲು ಸರ್ಕಾರ ಮತ್ತು ಸಚಿವರು ಗಮನ ಹರಿಸಬೇಕು ಎಂದು ಆಗ್ರಹಿಸಿದ್ರು.