ಹಾಸನ: ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ವಿವಾಹ ಬಂಧನದಿಂದ ದೂರವೇ ಉಳಿದ ಕಾಂಚನಮಾಲಾ ಎಂಬ ಮಹಿಳೆ ದೇಶಸೇವೆ ಮತ್ತು ಭೂತಾಯಿ ಸೇವೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೆ. ಸದ್ಯ ಸ್ಕೌಟ್ಸ್ ಮತ್ತು ಗೈಟ್ಸ್ನಲ್ಲಿ ಜಂಟಿ ಕಾರ್ಯದರ್ಶಿಯಾಗಿ ಇವರು ಕೆಲಸ ಮಾಡ್ತಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಇವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಉನ್ನತ ವ್ಯಾಸಂಗದ ಬಳಿಕ ಸಕಲೇಶಪುರದ ಬಾಳ್ಳುಪೇಟೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ರು. ನಿವೃತ್ತಿಯ ಬಳಿಕ ಸಮಾಜ ಸೇವೆ ಮತ್ತು ಭೂ ತಾಯಿಯ ಸೇವೆ ಮಾಡಬೇಕು ಎಂಬ ಆಶಯದೊಂದಿಗೆ ಸ್ಕೌಟ್ಸ್ ಮತ್ತು ಗೈಟ್ಸ್ಗೆ ತರಬೇತುದಾರರಾಗಿ ಸೇರಿದರು. 32 ವರ್ಷಗಳಿಂದ ಯಾವುದೇ ಫಲಾಫೇಕ್ಷೆಯಿಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಾಲು ಮರದ ತಿಮ್ಮಕ್ಕನವರ ಹಾಗೆಯೇ ಇವರು ಕೂಡಾ ಸುಮಾರು 1.5 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ವಿದ್ಯಾರ್ಥಿಗಳ ಸಹಾಯದಿಂದ ನೆಟ್ಟು ನೀರುಣಿಸಿ ಪೋಷಣೆ ಮಾಡ್ತಿದ್ದಾರೆ. ಸ್ಕೌಟ್ ಮತ್ತು ಗೈಟ್ಸ್ ಮೂಲಕ ಮಕ್ಕಳನ್ನು ಜೊತೆಗೂಡಿಸಿ ಪ್ರತಿನಿತ್ಯ ಗಿಡ ನೆಡುವ, ಕಲ್ಯಾಣಿ ಸ್ವಚ್ಚತೆ ಮತ್ತು ಹೂಳೆತ್ತುವ ಕಾರ್ಯ ಮಾಡ್ತಾ ಬಂದಿದ್ದಾರೆ.
ಬದುಕಿರುವ ತನಕ ದೇಶಸೇವೆ ಮಾಡುವೆ. ನನ್ನ ಈ ಸಮಾಜ ಸೇವೆಗೆ ತಂದೆಯೇ ಪ್ರೇರಣೆ. ಕೊನೆಯ ಉಸಿರಿರುವ ತನಕ ದೇಶಸೇವೆ, ಭೂತಾಯಿ ಸೇವೆ ಮಾಡಲು ಅವಕಾಶ ಕೊಡು ಎಂದು ದೇವರಲ್ಲಿ ಬೇಡುವೆ ಎಂದು ಕಾಂಚನಮಾಲಾ ಹೇಳುತ್ತಾರೆ.
ಇದನ್ನೂ ಓದಿ: ಮೀರಾ, ಮೇರಿ, ಸಿಂಧೂ, ಮಿಥಾಲಿ.. ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಮಹಿಳಾ ಸಾಧಕರು!
ಸದ್ಯ ಇವರಿಗೆ 82 ವರ್ಷ ವಯಸ್ಸು. ಇವರ ತಾಯಿಯೂ ಕೂಡ 98ರ ಆಸುಪಾಸಿನಲ್ಲಿದ್ದಾರೆ. ಕಾಂಚನಾಮಾಲಾ ತಾಯಿಗೆ ಆಸರೆಯಾಗಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಗುದ್ದಲಿ, ಪಿಕಾಸಿ ಹಿಡಿದು ಕೆಲಸ ಮಾಡುವ ಇವರು ಯುವಜನತೆಗೆ ಸ್ಫೂರ್ತಿ ಮತ್ತು ಪ್ರೇರಣಾ ಶಕ್ತಿ.