ಅರಕಲಗೂಡು(ಹಾಸನ) : ಕ್ವಾರಂಟೈನ್ಗೆ ಒಳಪಡುವವರಿಗಾಗಿ ಗೊರೂರು ಬಳಿ ಇರುವ ಹೇಮಾವತಿ ರೆಸಾರ್ಟ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ತಮ್ಮ ಸ್ವಂತ ಊರುಗಳಿಗೆ ತೆರಳಲು ಹೆಸರು ನೋಂದಾಯಿಸಿಕೊಂಡಿದ್ದ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಕಾರ್ಮಿಕರನ್ನು ಕಳುಹಿಸಿಕೊಟ್ಟು ಮಾತನಾಡಿದ ಅವರು, ತಾಲೂಕು ಆಡಳಿತದ ವತಿಯಿಂದ ಉತ್ತರ ಪ್ರದೇಶದ 14 ಕಾರ್ಮಿಕರನ್ನು ಬಸ್ ಮೂಲಕ ಮೈಸೂರಿಗೆ ಕಳಿಸಿಕೊಡಲಾಗಿದೆ.
ಬಿಹಾರ ರಾಜ್ಯಕ್ಕೆ ತೆರಳಲು 50 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಇವರ ಪೈಕಿ 46 ಮಂದಿ ಕಾರ್ಮಿಕರು ಬಂದಿದ್ದು, ಬಸ್ ಮೂಲಕ ಹಾಸನ ರೈಲ್ವೆ ನಿಲ್ದಾಣಕ್ಕೆ ಕಳಿಸಿಕೊಡಲಾಗಿದೆ. ಕಾರ್ಮಿಕರು ಶ್ರಮಿಕ್ ರೈಲಿನ ಮೂಲಕ ತಮ್ಮ ತಮ್ಮ ರಾಜ್ಯಕ್ಕೆ ತೆರಳುವರು. ಎಲ್ಲ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೊರೂರು ಬಳಿ ಇರುವ ಹೇಮಾವತಿ ರೆಸಾರ್ಟ್ ಅನ್ನು ಕ್ವಾರಂಟೈನ್ ಕೇಂದ್ರ ಮಾಡಲಾಗಿದೆ. ಇದಕ್ಕೆ ಜಿಲ್ಲಾ ಆಡಳಿತ ಅನುಮೋದನೆಯನ್ನೂ ನೀಡಿದೆ. ಇಲ್ಲಿ 20 ಕೊಠಡಿಗಳು ಇದ್ದು ಊಟ ಮತ್ತು ವಸತಿ ಸೇರಿ ಪ್ರತಿದಿನದ ವೆಚ್ಚ 750 ರೂ. ಇರುತ್ತದೆ. ಹೊರಗಿನಿಂದ ಬಂದವರು ಇಚ್ಚೆಪಟ್ಟಲ್ಲಿ ಇಲ್ಲಿ ಕ್ವಾರಂಟೈನ್ಗೆ ಒಳಪಡಬಹುದಾಗಿದೆ ಎಂದರು.