ಹಾಸನ: ದೇಶದಲ್ಲಿ ಕ್ರೀಡಾಸಕ್ತರು ಹೆಚ್ಚಿನ ಆಸಕ್ತಿ ವಹಿಸಿದ್ದರೂ ಅದಕ್ಕೆ ಪ್ರೋತ್ಸಾಹಿಸಬೇಕಾದ ಸರ್ಕಾರ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡುವ ಹಾಗೂ ಬಂಡವಾಳ ಹೂಡುವ ನಿಟ್ಟಿನಲ್ಲಿ ಹಿಂದುಳಿದಿದೆ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ಆರೋಪಿಸಿದರು.
ನಗರದ ಆದಿಚುಂಚನಗಿರಿ ಪ್ರೌಢಶಾಲಾ ಆವರಣದಲ್ಲಿ ವಾಲಿಬಾಲ್ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ರಂಗ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಶಿಕ್ಷಣದ ಜೊತೆ ಕ್ರೀಡಾ ಚಟುವಟಿಕೆಗಳಲ್ಲೂ ಯಶಸ್ಸು ಕಾಣುತ್ತಿವೆ. ಸರ್ಕಾರ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳನ್ನು ನಡೆಸಲು ಇಟ್ಟಿರುವ ಆಯವ್ಯಯ ಬಹಳ ಕಡಿಮೆ ಇದೆ. ಕ್ರೀಡೆಗೆ ಮಹತ್ವ ಬರಲು ಶಿಕ್ಷಣ ಸಂಸ್ಥೆ ಮುಂದೆ ಬರಬೇಕಿದೆ. ಆದರೆ ಇಂದು ಜಿಲ್ಲಾ ಮಟ್ಟದ ಕ್ರೀಡೆಗಳನ್ನು ನಡೆಸಲು ಖಾಸಗಿ ಶಾಲೆಗಳು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ಹಿರಿಯ ಕ್ರೀಡಾಪಟು ರೈಲ್ವೆ ಮಹಾದೇವ್ ಮಾತನಾಡಿ, ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಾಲಿಬಾಲ್ ಕ್ರೀಡಾಕೂಟವನ್ನು ಆದಿಚುಂಚನಗಿರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಶಂಭುನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಕ್ರೀಡೆಯ ಅಧ್ಯಕ್ಷರಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ನೇಮಕವಾಗಿದ್ದಾರೆ. ಕ್ರೀಡಾಕೂಟದಲ್ಲಿ 32 ತಂಡಗಳು, 480 ಕ್ರೀಡಾಪಟುಗಳು ಭಾಗವಹಿಸಲಿದ್ದು, 4 ಕ್ರೀಡಾ ಕೋಟ್‌ಗಳನ್ನು ಸಿದ್ಧಪಡಿಸಲಾಗಿದೆ. 28 ಪಂದ್ಯಗಳು, 30ಜನ ತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಇಒ ನಟರಾಜ್, ಕಾಲೇಜಿನ ಪ್ರಾಂಶುಪಾಲ ಲಿಂಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್, ತಾಲೂಕು ದೈಹಿಕ ಪರಿವೀಕ್ಷಕ ಬಸವರಾಜ್, ಶಿಕ್ಷಕರಾದ ನಾಗೇಶ್, ದಿವ್ಯಶ್ರೀ, ಭಾಗ್ಯ ಉಪಸ್ಥಿತರಿದ್ದರು.