ಹಾಸನ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪಂಚಾಯತ್, ನಗರಸಭೆ, ಎಪಿಎಂಸಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಸಂತೆಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಜೀವನಾದರ್ಶನವನ್ನು ಸಾರುವ ಹಲವು ಕಾರ್ಯಕ್ರಮಗಳು ನಡೆದವು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ದೇಶದ ಅಬಿವೃದ್ಧಿಯ ಕನಸು ಕಂಡವರು. ಅವರ ಆದರ್ಶಗಳು ಸದಾ ಅನುಕರಣೀಯ ಮತ್ತು ಗಾಂಧೀಜಿಯವರನ್ನು ಮಹಾತ್ಮ ಗಾಂಧಿಯನ್ನಾಗಿಸಿದ ಕೀರ್ತಿ ಕಸ್ತೂರ ಬಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದರು.
ಸರ್ವಧರ್ಮ ಪ್ರಾರ್ಥನೆ:
ಇದೇ ವೇಳೆ ಸರ್ವಧರ್ಮ ಹಾಗೂ ವಿವಿಧ ಧರ್ಮಗಳ ಸಾರದ ಬಗ್ಗೆ ಸಂದೇಶ ನೀಡಲಾಯಿತು. ಹಿಂದೂ ಧರ್ಮದ ಬಗ್ಗೆ ಶ್ರೀಧರ್ ಹರಿಹರಪುರ, ಇಸ್ಲಾಂ ಧರ್ಮದ ಬಗ್ಗೆ ಮುಫ್ತಿ ಆಸಿಫ್ ಮುಶ್ತಭ್, ಕ್ರೈಸ್ತ ಧರ್ಮದ ಕುರಿತು ಕಿರಣ್ ದಾಸ್, ಬೌದ್ಧ ಧರ್ಮದ ಬಗ್ಗೆ ಬಸವರಾಜು ದಮ್ಮಾಚಾರಿ, ಜೈನ ಧರ್ಮದ ಬಗ್ಗೆ ಜೀನರಾಜ್ ಸಂದೇಶ ನೀಡಿದರು. ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜ್ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಬದುಕು ಸಾಗಿಸುವ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಫಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಮತಿತ್ತರು ಹಾಜರಿದ್ದರು.
ಪ್ರಮುಖ ರಸ್ತೆಗಳಲ್ಲಿ ಕಸ, ಪ್ಲಾಸ್ಟಿಕ್ ಸಂಗ್ರಹಿಸಿ ಸ್ವಚ್ಛತಾ ಶ್ರಮದಾನ:
ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನ, ಸ್ವಚ್ಛತಾ ಸೇವಾ ಹಾಗೂ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪರಮೇಶ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ನಂತರ ಎಪಿಎಂ ಆವರಣ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಸಂಗ್ರಹಿಸುವ ಮೂಲಕ ಸ್ವಚ್ಛತಾ ಶ್ರಮದಾನ ಮಾಡಿದರು. ಈ ಆಂದೋಲನದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡ, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದರು.
ಈ ವೇಳೆ ವಾರ್ತಾ ಮ್ತತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಾ ತಂಡಗಳು ಭೂಮಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಗ್ಗೆ ಗೀತ ಗಾಯನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.