ಹಾಸನ : ದುಡ್ಡು ಕೊಟ್ಟು ಬಿಜೆಪಿಗೆ ಬರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅರಸೀಕೆರೆ ನಗರಸಭೆ ಸದಸ್ಯರೊಬ್ಬರು ಇಬ್ಬರು ಜೆಡಿಎಸ್ ಸದಸ್ಯರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಸಿಕಂದರ್ ಹಾಗೂ ಹರ್ಷವರ್ಧನ್ ಎಂಬ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರಾಗಿರುವ ಇವರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಕಡೆ ವಾಲಿದ್ದಾರೆ ಎಂದು ಹೇಳಲಾಗ್ತಿದೆ. ಹಾಗಾಗಿ, ಇನ್ನೋರ್ವ ಜೆಡಿಎಸ್ ಸದಸ್ಯೆ ಕಲೈ ಆರಸಿ ಎಂಬುವರಿಗೆ ಹಣದ ಆಮಿಷ ತೋರಿಸಿ ಬಿಜೆಪಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿದೆ.
![Slug FIR against two JDS members for Forceful Operation Kamala](https://etvbharatimages.akamaized.net/etvbharat/prod-images/12267839_.jpg)
ಜೆಡಿಎಸ್ ಸದಸ್ಯೆ ಕಲೈ ಅರಸಿ ನೀಡಿರುವ ದೂರಿನಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎನ್. ಆರ್ ಸಂತೋಷ್ ಅವರ ಹೆಸರು ಕೂಡ ಪ್ರಸ್ತಾಪಿಸಲಾಗಿದ್ದು, ಸಂತೋಷ್ ಅವರೇ ಹಣ ನೀಡಿ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ.
ಮನೆಗೆ ಬಂದು 10 ಲಕ್ಷ ರೂ. ಹಣ ಇಟ್ಟು ಬಿಜೆಪಿಗೆ ಬರುವಂತೆ ಕಿರುಕುಳ ನೀಡುತ್ತಿದ್ದಾರೆ. ಒಪ್ಪದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ ಎಂದು ಕಲೈ ಅರಸಿ ದೂರಿದ್ದಾರೆ. ಹಾಗಾಗಿ, ಅರಸೀಕೆರೆ ನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ಕೂಡ ದಾಖಲಾಗಿದೆ.