ಹಾಸನ : ನಿಮಗೆ ಬೇಕಾದ ದರ ನಿಗದಿಪಡಿಸಿ ರೈತರನ್ನು ಹಾಳು ಮಾಡುತ್ತಿರೇನ್ರೀ. ನಮಗೆ ಸೂಕ್ತ ಪರಿಹಾರ ಕೊಡದಿದ್ದರೆ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ ಎಂಬ ರೈತನ ಆಕ್ರೋಶದ ಮಾತಿಗೆ ಕ್ಯಾರೆ ಎನ್ನದೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಭೆಯಿಂದ ಹೊರ ನಡೆದ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲೆಯ ಆಲೂರು ತಾಲೂಕಿನ ಎತ್ತಿನಹೊಳೆ ವೀಕ್ಷಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ರೈತರ ಜಮೀನಿಗೆ ಸೂಕ್ತ ಪರಿಹಾರ ಕೊಡಲು ನಾವು ಸಿದ್ಧವಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನ್ಯಾಯಾಲಯ ಆದೇಶ ಮಾಡಿರುವ ಪ್ರಕಾರ ಪ್ರಸ್ತುತ ದರದ ನಾಲ್ಕು ಪಟ್ಟು ಹಣವನ್ನು ನಾವು ರೈತರಿಗೆ ಕೊಡುತ್ತೇವೆ ಎನ್ನುತ್ತಿರುವಾಗ ಸ್ಥಳದಲ್ಲಿದ್ದ ರೈತನೋರ್ವ ಸಿಟ್ಟಿನಿಂದ ಯೋಜನೆ ಪ್ರಾರಂಭ ಆದಾಗಿನಿಂದ ರೈತರ ಬಗ್ಗೆ ಯಾರೊಬ್ಬರೂ ಮಾತನಾಡಿಲ್ಲ.
ಓದಿ-ಮೋದಿ ಕಾಲದಲ್ಲಿಯೂ ಧೂಳೆಬ್ಬಿಸುತ್ತಿವೆ ನೆಹರು ಜಮಾನದ ಬೈಕ್ಗಳು: ಉಡುಪಿ ಯುವಕನ ಬೈಕ್ ಕಲೆಕ್ಷನ್ಗೆ ಜನ ಫಿದಾ
ಕಾಮಗಾರಿ ಮಾಡುತ್ತಿದ್ದಾರೆಯೇ ಹೊರತು ನಮ್ಮ ಜಮೀನಿಗೆ ಸೂಕ್ತ ದರ ನಿಗದಿ ಮಾಡಿಲ್ಲ. ಇದು ನಿಮ್ಮ ಕಟ್ಟುಕತೆ. ಕಣ್ಣೊರೆಸುವ ತಂತ್ರ ಬೇಡ. ಯಾವುದೇ ದರ ನಿಗದಿ ಮಾಡಬೇಕಾದರೆ ಗ್ರಾಮಸಭೆ ಮಾಡಬೇಕು. ಅಲ್ಲಿ ರೈತರೊಡನೆ ಚರ್ಚಿಸಿ ದರ ನಿಗದಿಪಡಿಸಿ ಪರಿಹಾರ ನೀಡಬೇಕು. ಆದರೆ ನೀವು ನಿಮಗೆ ಬೇಕಾದ ರೀತಿಯಲ್ಲಿ ದರ ನಿಗದಿಪಡಿಸಿ, ನಮಗೆ ಅನ್ಯಾಯ ಮಾಡುತ್ತಿದ್ದೀರಿ. ಯಾರನ್ನು ಕೇಳಿ ನೀವು ದರ ನಿಗದಿ ಮಾಡುತ್ತಿದ್ದೀರಿ?. ನಮಗೆ ಸೂಕ್ತ ಪರಿಹಾರ ಕೊಡದಿದ್ದರೆ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಮುಂದುವರೆಸಲು ಬಿಡುವುದಿಲ್ಲ ಎಂದು ರೈತನೊಬ್ಬ ಆಕ್ರೋಶವಾಗಿ ಮಾತನಾಡಿದ. ಕೂಡಲೇ ಸಚಿವ ರಮೇಶ್ ವೇದಿಕೆಯಿಂದ ಹೊರಟರು.
ಇದರಿಂದ ಬೇಸರ ವ್ಯಕ್ತಪಡಿಸಿದ ರೈತರು, ರೈತನ ಮಾತಿಗೆ ಧ್ವನಿಗೂಡಿಸಿ ಇದುವರೆಗೂ ನಮಗೆ ಒಂದು ನಯಾ ಪೈಸೆ ಕೂಡ ಪರಿಹಾರ ಕೊಟ್ಟಿಲ್ಲ. ಆದರೆ ಕಾಮಗಾರಿಯನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.