ಹಾಸನ: ಮನೆಗೊಂದು ಮರ ಬೆಳೆಸಿದ್ರೆ ಊರಿಗೊಂದು ವನ ಸೃಷ್ಠಿಯಾಗುವುದರಲ್ಲಿ ಅನುಮಾನವಿಲ್ಲ. ಸಾಲು ಮರದ ತಿಮ್ಮಕ್ಕನವರು, ಮರಗಳನ್ನ ಬೆಳೆಸುವ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಅದೇ ರೀತಿ ಹಾಸನದ ಚನ್ನರಾಯಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಕಳೆದ ಮೂರು ದಶಕಗಳಿಂದ ಗಿಡ ನೆಡುವುದಷ್ಟೇ ಅಲ್ಲದೇ ಗಿಡಗಳನ್ನು ಉಚಿತವಾಗಿ ನೀಡುವ ಮೂಲಕ ಬಹುದೊಡ್ಡ ಸಾಧನೆ ಮಾಡ್ತಿದ್ದಾರೆ. ಚನ್ನರಾಯಪಟ್ಟಣದ ಜನತೆ ಪ್ರೀತಿಯಿಂದ ಕರೆಯುವ ಅಶೋಕಣ್ಣ ಅಂದ್ರೆ, ಚ.ನಾ.ಅಶೋಕ್ ಅವರು, ಕಳೆದ ಮೂರು ದಶಕಗಳಿಂದಲೂ ಪರಿಸರ ಕಾಳಜಿ ವಹಿಸಿಕೊಂಡು ಬರುತ್ತಿದ್ದಾರೆ.
ಪ್ರತಿವರ್ಷ ಗಿಡಗಳಿಗೆ ನೀರೆರೆದು ಪೋಷಣೆ ಮಾಡ್ತಾ ಬಂದಿದ್ದಾರೆ. ಪರಿಸರ ಪ್ರೇಮಿಯಾಗಿರುವ ಇವರು ಇಂದಿನ ಯುವ ಜನತೆಗೆ ಆದರ್ಶವಾಗಿದ್ದಾರೆ. ಪದವಿ ಪಡೆದಿರುವ ಇವರು ಕೆಲಸಕ್ಕೆ ಹೋಗದೇ ತಂದೆ ನಡೆಸುತ್ತಿದ್ದ ಶಾಲೆಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಇವರು ಶಾಲೆಯೊಳಗೆ ಹೆಚ್ಚು ಸಮಯವನ್ನ ಕಳೆಯುವುದಕ್ಕಿಂತ ಗಿಡ-ಮರಗಳ ನಡುವೆಯೇ ಹೆಚ್ಚು ಸಮಯವನ್ನ ಕಳೆದಿದ್ದಾರೆ.
'ಭೂಮಿ ಉಳಿಸಿ ಆಂದೋಲನ'ವೆಂಬ ಸಂಸ್ಥೆಯನ್ನು ಸ್ಥಾಪಿಸಿ ಗಿಡಗಳ ರಕ್ಷಣೆಗೆ ನಿಂತಿದ್ದಾರೆ. ಅರಣ್ಯ ಇಲಾಖೆಯ ಸಹಾಯ ಪಡೆದು ತಮ್ಮ ಜಮೀನಿನಲ್ಲಿ ಸಸಿಗಳ ನರ್ಸರಿ ಮಾಡಿ, ಖುದ್ದು ಯಾರ ಸಹಾಯವನ್ನು ಪಡೆಯದೇ ಗಿಡಗಳಿಗೆ ಪಾತಿ ಮಾಡಿ ನೀರುಣಿಸಿ ಪೋಷಣೆ ಮಾಡಿದ್ದಾರೆ. ಪ್ರತಿವರ್ಷ 1 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸುವ ಇವರ ಕಾರ್ಯಕ್ಕೆ ಹಲವು ಪ್ರಶಸ್ತಿಗಳು ಮುಡಿಗೇರಿವೆ. ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ರಾಷ್ಟ್ರೀಯ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಅಂದಿನ ರಾಜ್ಯಪಾಲರಾಗಿದ್ದ ಚತುರ್ವೇದಿಯವರು ಇವರ ಕಾರ್ಯವನ್ನ ಗುರುತಿಸಿ ಪರಿಸರ ಪ್ರೇಮಿ ಪ್ರಶಸ್ತಿಯನ್ನ ನೀಡಿ ಗೌರವಿದ್ದಾರೆ.
ಇವರ ಈ ಕಾರ್ಯಕ್ಕೆ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿಯವರು ಕಾರಣರಾಗಿದ್ದು, ಅವರ ಪರಮ ಭಕ್ತರಾಗಿದ್ದ ಅಶೋಕ್ ಅವರಿಗೆ ಶ್ರೀಗಳು ಹೇಳುತ್ತಿದ್ದ ಪರಿಸರ ಕುರಿತ ಮಾತುಗಳು ಇವರ ಮನಸ್ಸಿಗೆ ಆಳವಾಗಿ ನಾಟಿವೆಯಂತೆ. ಶ್ರೀಗಳ ಗಿಡ ವಿತರಣೆ ಕಾರ್ಯಕ್ರಮವನ್ನು ಇವರು ಮುಂದುವರೆಸಿಕೊಂಡು ಬರುತ್ತಿದ್ದು, ಪ್ರತಿವರ್ಷ 50ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೀಡುವ ಮೂಲಕ ರೈತರ ಹಾಗೂ ಭೂತಾಯಿಯ ಸೇವೆಯನ್ನ ಮಾಡ್ತಿದ್ದಾರೆ.
ಕಳೆದ 2012ರಲ್ಲಿ ಮಕ್ಕಳಲ್ಲಿ ಪರಿಸರ ಕಾಳಜಿ, ಸಾಹಿತ್ಯಾತ್ಮಕ ಬೆಳವಣಿಗೆಯನ್ನ ಹೊರತರುವ ಕಾರ್ಯ ಮಾಡಬೇಕೆಂದು, ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಪರಿಷತ್ ಸ್ಥಾಪಿಸಿದ್ರು. ನಿರಂತರ ಆರು ವರ್ಷಗಳಿಂದಲೂ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನ ಹೊರತರುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇನ್ನು ಚನ್ನರಾಯಪಟ್ಟಣದಲ್ಲಿರುವ ಬೆಲಸಿಂದ ಉದ್ಯಾನವನದಲ್ಲಿ ಸಾವಿರಾರು ಗಿಡಗಳನ್ನ ಬೆಳೆಸುವ ಮೂಲಕ ಅಲ್ಲಿ ಸುಂದರ ಪರಿಸರ ನಿರ್ಮಿಸಿದ್ದಾರೆ. ಅಲ್ಲಿ ಸಹಸ್ರಾರು ಔಷಧಿ ಗಿಡಗಳನ್ನ ನಾವು ಕಾಣಬಹುದಾಗಿದೆ. ಅಲ್ಲದೇ ಪಟ್ಟಣದಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆಯ ಎರಡು ಬದಿಯಲ್ಲಿಯೂ ಕೂಡಾ ಗಿಡಗಳನ್ನ ನೆಟ್ಟು ಪೋಷಣೆ ಮಾಡ್ತಿದ್ದಾರೆ.
ಕೆ.ಆರ್. ವೃತ್ತದಲ್ಲಿ ಆಕರ್ಷಕ ಕೈತೋಟ ನಿರ್ಮಿಸಿ ನೋಡುಗರನ್ನ ಸೆಳೆಯುವಂತೆ ಮಾಡಿದ್ದಾರೆ. ಅವರ ಜಮೀನಿನನಲ್ಲಿ ವಿವಿಧ ಜಾತಿಯ ಮರಗಳು, ಸಾವಿರಾರು ಔಷಧಿಗಿಡಿಗಳು, ಅಲಂಕಾರಿಗಕಾ ಕ್ರೋಟಾನ್ ಜಾತಿಯ ಗಿಡಗಳು ಪೋಷಣೆಯಿಂದ ಬೆಳೆಸಿದ್ದಾರೆ. ಪ್ರತಿವರ್ಷ ತಾವು ಬೆಳಸಿದ ಗಿಡಗಳನ್ನು ಆದಿಚುಂಚನಗಿರಿ ಪೀಠಾಧ್ಯಕ್ಷರ ಸಮ್ಮುಖದಲ್ಲಿ ಉಚಿತವಾಗಿ ರೈತರಿಗೆ ಕೊಡುವ ಕೆಲಸವನ್ನ ಮಾಡ್ತಾ ಬಂದಿದ್ದಾರೆ. ಕಳೆದ ಮೂರು ದಶಕಗಳಿಂದಲೂ ಸುಮಾರು 20 ಲಕ್ಷಕ್ಕೂ ಅಧಿಕ ಗಿಡಗಳನ್ನ ನೀರೆರೆದು ಪೋಷಣೆ ಮಾಡಿ ರೈತರಿಗೆ, ನಾಗರಿಕರಿಗೆ ವಿತರಣೆ ಮಾಡಿರುವುದು ಹೆಮ್ಮೆಯ ಸಂಗತಿ.