ಹಾಸನ: ಇಂದು ನಸುಕಿನ ಜಾವ ಎರಡು ಕಂಟೈನರ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಗುರುತು ಸಿಗಲಾರದಷ್ಟು ರೀತಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಬಳಿ ನಡೆದಿದೆ.
ಕಂಟೈನರ್ ಗಳ ಚಾಲಕರಾದ ದಿಲೀಪ್ ಗೌಡ (25) ಮತ್ತು ಚಂದ್ರಶೇಖರ್ (36) ಮೃತರು. ಅಪಘಾತದ ರಭಸಕ್ಕೆ ಮೃತದೇಹಗಳು ಕಂಟೈನರೊಳಗೆ ಸಿಲುಕಿ, ಗುರುತು ಸಿಗಲಾರದಷ್ಟು ಛಿದ್ರವಾಗಿವೆ. ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಮೃತದೇಹಗಳನ್ನು ಕ್ರೇನ್ ಹಾಗೂ ಸ್ಥಳೀಯರ ಸಹಾಯದಿಂದ ಹೊರತೆಗೆದರು. ಛಿದ್ರಗೊಂಡ ಮೃತದೇಹಗಳನ್ನ ಒಟ್ಟುಗೂಡಿಸಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.
ಇನ್ನು ರಾಷ್ಟ್ರೀಯ ಹೆದ್ದಾರಿ 48ನ್ನು ಎನ್ಹೆಚ್ಎಐ ಮೂಲಕ ರಾ.ಹೆ.75ಕ್ಕೆ ಬದಲಾಯಿಸಿ ಚತುಷ್ಪಥ ರಸ್ತೆ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಗುಂಡಿಯನ್ನ ತೆಗೆದಿರುವುದರಿಂದ ನಸುಕಿನ ಜಾವದಲ್ಲಿ ಚಾಲಕರಿಗೆ ರಸ್ತೆ ಸರಿಯಾಗಿ ಕಾಣದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮಂಗಳೂರು ಕಡೆಯಿಂದ ಬರುತ್ತಿದ್ದ ಎರಡು ಕಂಟೈನರ್ಗಳು ಅಪಘಾತಕ್ಕೀಡಾಗಿವೆ.
ಇನ್ನು ಇದಕ್ಕೆಲ್ಲಾ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ಎಂಬುದು ಸ್ಥಳೀಯರ ಆರೋಪವಾಗಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಆದ್ರೆ ಹೆದ್ದಾರಿ ಮಾಡುವ ಗುತ್ತಿಗೆಯನ್ನ ಪಡೆದು 5-6 ವರ್ಷಗಳಾದ್ರು ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಘಟನೆ ಸಂಭವಿಸಿದ ಹಿನ್ನಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸಂಚಾರಿ ಪೊಲೀಸರು ಸಂಚಾರವನ್ನ ಸುಗಮಗೊಳಿಸಿ ಅಪಘಾತಕ್ಕೊಳಗಾದ ವಾಹನಗಳನ್ನ ವಶಕ್ಕೆ ಪಡೆದರು. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.