ಅರಸೀಕೆರೆ (ಹಾಸನ): ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ 4 ಮಾಂಸದಂಗಡಿಗಳ ಮೇಲೆ ದಾಳಿ ನಡೆಸಿ ಗೋ ಮಾಂಸ ಮತ್ತು ಮಾಂಸಕ್ಕಾಗಿ ತಂದಿದ್ದ ಕೆಲವು ಹಸುಕರುಗಳನ್ನ ರಕ್ಷಿಸುವಲ್ಲಿ ಅರಸೀಕೆರೆ ಪೊಲೀಸರು ಮತ್ತು ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.
ಅರಸೀಕೆರೆ ಪಟ್ಟಣದಲ್ಲಿ ಅಕ್ರಮ ಕೃತ್ಯ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದ ನಂದಿನಿ ಮತ್ಯಾನಿ ನೇತೃತ್ವದಲ್ಲಿ ಕಾರ್ಯಕರ್ತರು, ಅಂಗಡಿಯಲ್ಲಿದ್ದ ಗೋಮಾಂಸ ಮತ್ತು ಮಾಂಸವನ್ನು ತುಂಡರಿಸುವ ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿ ಬಳಿಕ ಅಂಗಡಿಗಳನ್ನ ಸೀಲ್ಡೌನ್ ಮಾಡಿಸಿದ್ದಾರೆ.
ಮಾಂಸಕ್ಕಾಗಿ ಖರೀದಿಸಿದ್ದ 6 ಹಸುಕರು, 3 ಎಮ್ಮೆ, 1 ಎತ್ತು ಮತ್ತು 3 ಗೋವುಗಳನ್ನು ರಕ್ಷಿಸಿದ್ದು, ಅವುಗಳನ್ನ ಮೈಸೂರಿನ ಪಿಂಜರ್ ಪೊಲ್ ಗೋ ಸಾಕಾಣಿಕಾ ಕೇಂದ್ರಕ್ಕೆ ರವಾನಿಸಲಾಗಿದೆ. ಜೊತೆಗೆ ಕೃತ್ಯವನ್ನು ನಡೆಸುತ್ತಿದ್ದ ಅಂಗಡಿ ಮಾಲೀಕರುಗಳಾದ ಶವಾಜ್, ಅಫ್ರೋಜ್ ರೆಹಮಾನ್ ಹಾಗೂ ಇತರರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.