ಚನ್ನರಾಯಪಟ್ಟಣ (ಹಾಸನ): ಕೊರೊನಾ ಎಂಬ ಮಹಾಮಾರಿ ಭಾರತಕ್ಕೆ ಕಾಲಿಟ್ಟ ನಂತರ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ. ಈಗಾಗಲೇ ಕೆಲವೊಂದು ಷರತ್ತುಗಳನ್ನು ವಿಧಿಸಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ.
ಲಾಕ್ಡೌನ್ ಸಡಿಲಿಕೆ ನಂತರ ಎಲ್ಲರಿಗೂ ಜೀವಭಯ ಕಾಡತೊಡಗಿದೆ. ಹೀಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಮಾತಿನಂತೆ ನಾವೇ ಸ್ವತಃ ದಿಗ್ಭಂಧನ ಹಾಕಿಕೊಂಡು ಕೊರೊನಾ ಹೆಮ್ಮಾರಿಯನ್ನು ಓಡಿಸಬೇಕಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ದೇಶಾದ್ಯಂತ ಹಾಡು, ಕಿರುಚಿತ್ರಗಳನ್ನು ತಯಾರಿಸಲಾಗಿದೆ. ಬೀದಿ ನಾಟಕಗಳನ್ನು ಮಾಡಲಾಗಿದೆ. ಇದೀಗ ಹಾಸನದ ಪ್ರತಿಭೆಗಳು ಕೂಡಾ ಇಂತದ್ದೊಂದು ಪ್ರಯೋಗ ಮಾಡಿದ್ದಾರೆ. ಭಾರತದ ವಿವಿಧೆಡೆ ಕೆಲಸ ಮಾಡುತ್ತಿರುವವರು ಈ ಗೀತೆಯಲ್ಲಿ ನಟಿಸಿದ್ದಾರೆ. ಈ ಹಾಡಿನ ಮೂಲಕ ಎಲ್ಲರೂ ಕೊರೊನಾ ವಾರಿಯರ್ಸ್ಗೆ ಧನ್ಯವಾದ ಅರ್ಪಿಸಿದ್ದಾರೆ.
ಎನ್ಕೌಂಟರ್ ದಯಾನಾಯಕ್ ಚಿತ್ರದ ನಾಯಕ, ಬಟರ್ ಫ್ಲೈ ಫಿಲಂ ಪ್ರೊಡಕ್ಷನ್ ಮಾಲೀಕ ಸಚಿನ್ ಸುವರ್ಣ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡು ಇದು. ಹಾಡಿನ ಮಾಲೀಕತ್ವವನ್ನು ವಿದ್ಯಾ ಸುವರ್ಣ ಪಡೆದುಕೊಂಡಿದ್ದು ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಸರ್ವೇಶ್ ಜೈನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡನ್ನು ಸರ್ವೇಶ್ ಜೈನ್, ಅವರ ಪತ್ನಿ ಸೌಮ್ಯ ಸರ್ವೇಶ್ ಮತ್ತು ತುಳು ಗಾಯಕಿ ಮಂಜುಶ್ರೀಯವರು ಹಾಡಿದ್ದಾರೆ.
ತುಳು ಮತ್ತು ಕನ್ನಡ ಎರಡೂ ಭಾಷೆಯ ಮಿಶ್ರಣದ ಹಾಡು ಇದಾಗಿದ್ದು ತುಳುವಿನಲ್ಲಿ ತೀರ್ಥಹಳ್ಳಿಯ ಡಿಬಿಸಿ ಶೇಖರ್ ಸಾಹಿತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡದಲ್ಲಿ 'ನನ್ನ ನಿನ್ನ ಪ್ರೇಮಕಥೆ' ಚಿತ್ರದ ನಿರ್ದೇಶಕ ಜಮಖಂಡಿ ಶಿವು ಸಂಯೋಜನೆ ಮಾಡಿದ್ದಾರೆ. ಮೋದಿಯವರು ಹೇಳಿರುವಂತೆ ಮನೆಯೊಳಗೆ ಇದ್ದು ಕೊರೊನಾ ಹರಡದಂತೆ ಜಾಗರೂಕರಾಗೋಣ ಆಗ ಮಾತ್ರ ನಮ್ಮ ದೇಶ ದೈನಂದಿನ ಕೆಲಸಗಳಿಗೆ ಬೇಗ ಮುಕ್ತಿ ಸಿಗುತ್ತದೆ ಎಂಬ ಸಂದೇಶವನ್ನು ಈ ಹಾಡಿನಲ್ಲಿ ತಿಳಿಸಲಾಗಿದೆ.
ಬಟರ್ ಫ್ಲೈ ಬ್ಯಾನರ್ ಅಡಿಯಲ್ಲೇ 'ತಂಬಿಲಾ' ಎಂಬ ಚಿತ್ರವನ್ನು ತುಳು, ಕನ್ನಡ ಎರಡೂ ಭಾಷೆಯಲ್ಲಿ ಮಾಡಲಾಗುತ್ತಿದೆ. ಆ ಚಿತ್ರಕ್ಕೆ ಕೂಡಾ ಹಾಸನ ಮೂಲದ ಸರ್ವೇಶ್ ಜೈನ್ ಅವರೇ ಸಂಗೀತ ಸಂಯೋಜಿಸಿದ್ದಾರೆ. ಹಿಂದೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ 'ತಮ್ ಗೊಮ್ಮಟೇಶಂ ಪ್ರಣಮಾಮಿ ನಿಚ್ಚಂ' ಎಂಬ ಹಾಡನ್ನು ಸರ್ವೇಶ್ ಮತ್ತು ಪತ್ನಿ ಸೌಮ್ಯ ಸರ್ವೇಶ್ 12 ಭಾಷೆಗಳಲ್ಲಿ ಹಾಡಿ ಶ್ರವಣಬೆಳಗೊಳದ ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು.