ಹಾಸನ: 20 ಎಳೆಯ ಕರುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸರು 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ಗಂಡಸಿ ಹಾಗೂ ಹೊಸೂರು ಮೂಲದ ನೂರುಲ್ಲಾ, ರಹೀಂ, ಸುಲ್ತಾನ್, ಆರೀಫ್, ಇರ್ಫಾನ್, ಸಬೀರ್ ಅಹಮದ್, ಅಬ್ದುಲ್ ಮುಬಾರಕ್, ಜೀವನ್, ಪುರುಷೋತ್ತಮ್ ಬಂಧಿತ ಆರೋಪಿಗಳು.
![Accidental death of 20 calves; 10 arrested](https://etvbharatimages.akamaized.net/etvbharat/prod-images/hsn-cow-accident-arrest-av_23082021220317_2308f_1629736397_859.jpg)
ಬೇಲೂರು ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಆಗಸ್ಟ್ 19 ರಂದು ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ರಾತ್ರಿ ಗೂಡ್ಸ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು. ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ 60ಕ್ಕೂ ಹೆಚ್ಚು ಕರುಗಳಲ್ಲಿ, ಸುಮಾರು 20 ಕರುಗಳು ಮೃತಪಟ್ಟಿದ್ದವು.
ಅಕ್ರಮ ಸಾಗಣೆ ವೇಳೆ ಕರುಗಳ ಕಾಲಿಗೆ, ಬಾಯಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಣೆ ಮಾಡಲಾಗಿತ್ತು. ಈ ಘಟನೆ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಲಿಂಗೇಶ್, ಡಿಸಿ ಆರ್.ಗಿರೀಶ್, ಎಸ್‍ಪಿ ಆರ್. ಶ್ರೀನಿವಾಸ್ ಗೌಡ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಹಾಸನ ಮಂಗಗಳ ಮಾರಣಹೋಮ ಪ್ರಕರಣ: ತನಿಖೆಯಲ್ಲಿ ಬಯಲಾಯ್ತು ಸಾವಿನ ರಹಸ್ಯ
ಇದೀಗ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದಲ್ಲಿ ಬದುಕುಳಿದಿದ್ದ 20ಕ್ಕೂ ಹೆಚ್ಚು ಕರುಗಳನ್ನು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಗೋಶಾಲೆಗೆ ಬಿಟ್ಟಿದ್ದಾರೆ.