ಗದಗ: ವಿನಯ್ ಕುಲಕರ್ಣಿ ವಿಚಾರದಲ್ಲಿ ನ್ಯಾಯ ಸಮ್ಮತ ವಿಚಾರಣೆ ನಡೆಯಬೇಕು ಎಂದು ಗದಗ್ನ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ಹಿನ್ನೆಲೆ ದಿಢೀರ್ ಎಂದು ಗದಗ ಮಠಕ್ಕೆ ಲಿಂಗಾಯತ ಧರ್ಮದ ಹಲವು ಸ್ವಾಮೀಜಿಗಳು ಆಗಮಿಸಿದ ಹಿನ್ನೆಲೆ ಸ್ವಾಮೀಜಿಗಳ ಚರ್ಚೆ ಬಳಿಕ ಸಿದ್ದರಾಮ ಸ್ವಾಮೀಜಿ ಮಾತನಾಡಿದರು. ಹಲವು ಸ್ವಾಮಿಗಳು ತೋಂಟದಾರ್ಯ ಮಠಕ್ಕೆ ಭೇಟಿ ಕೊಟ್ಟಿದ್ದಾರೆ ನಿಜ. ಆದರೆ ಯಾಕೆ ಬಂದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಇನ್ನು ವಿನಯ್ ಕುಲಕರ್ಣಿ ಬಂಧನ ವಿಚಾರವಾಗಿ ಮಾತನಾಡಿದ ಅವರು ಕೊಲೆ ಆದ ಸಂತ್ರಸ್ತರು ಹಾಗೂ ವಿನಯ್ ಕುಲಕರ್ಣಿ ಇಬ್ಬರು ಲಿಂಗಾಯತರೇ. ಜಾತಿ-ಮತ-ಪಂಥ ಯಾವುದು ಸಂಬಂಧವಿಲ್ಲ. ವಿನಯ್ ಕುಲಕರ್ಣಿ ಅಪರಾಧಿಯಲ್ಲ ಆರೋಪಿ ಅಷ್ಟೇ. ನಮಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರವಾದ ಗೌರವವಿದೆ. ಸಿಬಿಐನವರು ನ್ಯಾಯಯುತವಾದ ವಿಚಾರಣೆ ನಡೆಸುತ್ತಾರೆಂಬ ಆಶಾ ಭಾವನೆ ಇದೆ. ವಿನಯ ಕುಲಕರ್ಣಿ ನಿರಪರಾಧಿಯಾಗಿ ಹೊರಗೆ ಬರಬೇಕು ಎಂಬ ಆಶಾ ಭಾವನೆ ನಮ್ಮದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಉಳಿದ ಸ್ವಾಮೀಜಿಗಳ ವಿಷಯಗಳನ್ನು ಕೇಳಬೇಡಿ, ಅದು ಅವರರವರ ವೈಯಕ್ತಿಕ ವಿಚಾರ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಾವು ಹಸ್ತಕ್ಷೇಪ ಮಾಡಬಾರದು, ಯಾವುದೇ ರಾಜಕೀಯ ಹಸ್ತಕ್ಷೇಪ ನಡೆಯಬಾರದು ಎಂದು ಪ್ರತಿಕ್ರಿಯಿಸಿದರು.