ಗದಗ: ಜಿಲ್ಲೆಯ ಐತಿಹಾಸಿಕ ಕೆರೆ ನುಂಗಣ್ಣರ ಪಾಲಾಗುತ್ತಿದೆ ಎಂಬ ಆರೋಪದ ಕೂಗಿಗೆ ಸ್ಪಂದಿಸಿರುವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕೆರೆ ಸರ್ವೆಗೆ ಮುಂದಾಗಿದೆ. ಕೆರೆ ಸರ್ವೆಗೆ ಸ್ವತಃ ಜಿಲ್ಲಾ ನ್ಯಾಯಾಧೀಶರೇ ಮುಂದಾಗಿದ್ದಾರೆ.
ಉತ್ತರ ಕರ್ನಾಟಕದ ಹೆಸರಾಂತ ಕೆರೆ ಭೀಷ್ಮ ಕೆರೆ ಅತಿಕ್ರಮಣಕ್ಕೆ ಒಳಗಾಗಿದೆ ಅನ್ನೋ ಆರೋಪದ ಹಿನ್ನೆಲೆ ಮಂಗಳವಾರದಿಂದ ಸರ್ವೇ ಕಾರ್ಯ ಆರಂಭವಾಗಿದೆ. 103 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ಪ್ರಭಾವಿಗಳ ಒತ್ತುವರಿಗೆ ಸಿಲುಕಿದೆ. ಭೀಷ್ಮ ಕೆರೆ ಅತಿಕ್ರಮಣ ಮಾಡಿದ್ದ ಪ್ರಭಾವಿಗಳು ಕೆರೆಯ ಅಂಗಳದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದಾರೆ ಅನ್ನೋ ಆರೋಪವೂ ಇದೆ.
ಈಗ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಗದಗ ಜಿಲ್ಲಾಡಳಿತಕ್ಕೆ ಭೀಷ್ಮ ಕೆರೆ ಸರ್ವೇ ಮಾಡುವಂತೆ ನಿರ್ದೇಶನ ನೀಡಿದೆ. ಹೀಗಾಗಿ ಗದಗ ಭೂಮಾಪನ ಅಧಿಕಾರಿಗಳು ಕೆರೆಯಂಗಳಕ್ಕೆ ಭೇಟಿ ನೀಡಿ ಸರ್ವೇ ಕಾರ್ಯ ಆರಂಭಿಸಿದ್ದಾರೆ. ಕೂಡಲೇ ಒಂದು ವಾರದೊಳಗೆ ಸರ್ವೇ ಮಾಡಿ ವರದಿಯನ್ನು ನೀಡುತ್ತೇವೆ ಎಂದು ಭೂ ಮಾಪನ ಅಧಿಕಾರಿಗಳು ತಿಳಿಸಿದ್ದಾರೆ.
ಭೀಷ್ಮ ಕೆರೆಯ ವಿಸ್ತೀರ್ಣ ಒಟ್ಟು 103 ಎಕರೆ ಪ್ರದೇಶ ಇದೆ ಅನ್ನೋದು ನಗರಸಭೆಯ ದಾಖಲೆಯಲ್ಲಿದೆ. ಆದರೆ, ಕೆರೆಯ ಸುತ್ತಲೂ ಸಾಕಷ್ಟು ಪ್ರದೇಶ ಅತಿಕ್ರಮಣಗೊಂಡಿದೆ ಮತ್ತು ನಗರಸಭೆ ಕೆಲ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಸರ್ಕಾರಿ ಜಾಗೆಯನ್ನು ಖಾಸಗಿಯವರಿಗೆ ನೀಡಿದ್ದಾರೆ ಎನ್ನಲಾಗ್ತಿದೆ. ಈಗ ಸರ್ವೇ ಕಾರ್ಯವೇನೋ ನಡೆದಿದೆ. ಇದರಿಂದ ಕೆರೆಗೆ ಮತ್ತೆ ಮೂಲ ಸ್ವರೂಪ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.