ಗದಗ: ರಾಜಕಾರಣಿಯಾಗಿ ಅಧಿಕಾರ ಗಿಟ್ಟಿಸಿಕೊಳ್ಳಬೇಂಬ ಆಸೆ ಸಾಮಾನ್ಯವಾಗಿ ಹಲವರಿಗೆ ಇರುತ್ತೆ. ಆದರೆ, ಎಲ್ಲರಿಗೂ ಅದು ದಕ್ಕಲ್ಲ. ಇಲ್ಲೋರ್ವ ವ್ಯಕ್ತ ಕೂಡ ಹಾಗೇನೆ, ರಾಜಕಾರಣಿಯಾಗಬೇಕೆಂದು ಪ್ರಯತ್ನಪಟ್ಟು ಸೋತು, ಕೊನೆಗೆ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.
ಜಿ.ಪಂ. ಚುನಾವಣೆಗೆ ಸ್ಪರ್ಧಿಸಬೇಕೆಂದು ಬರೋಬ್ಬರಿ 50 ಲಕ್ಷ ರೂ. ಸಾಲ ಮಾಡಿ, ಕೊನೆಗೆ ಒಂದು ಪಕ್ಷದಿಂದ ಟಿಕೆಟ್ ಸಿಗದಿದ್ದಾಗ ಬೇಸತ್ತು ರಾಜಕಾರಣದಿಂದ ದೂರ ಉಳಿದ ವ್ಯಕ್ತಿ, ಸಾಲ ಪಡೆದು ಕೂಡಿಟ್ಟುಕೊಂಡಿದ್ದ ಅದೇ ಹಣದಲ್ಲಿ ಕೃಷಿ ಮಾಡಿ ಕೋಟ್ಯಾಧೀಶನಾಗಿದ್ದಾರೆ.
ಹೌದು, ನಾವು ಹೇಳಲು ಹೊರಟಿರುವುದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದ ರೈತ ಚೆನ್ನಪ್ಪ ಜಗಲಿಯವರ ಯಶೋಗಾಥೆಯಾಗಿದೆ. ದೊಡ್ಡೂರು ಗ್ರಾಮದ ನಿವಾಸಿಯಾದ ಚೆನ್ನಪ್ಪ ಅವರು, ಮಾಜಿ ತಾ.ಪಂ. ಸದಸ್ಯರೂ ಹೌದು. ಜಿ.ಪಂ ಚುನಾವಣೆಗೆ ಸ್ಪರ್ಧಿಸಬೇಕೆಂದು ಮಹದಾಸೆ ಹೊಂದಿದ್ದ ಇವರು, ಅದಕ್ಕಾಗಿ ಸುಮಾರು 50 ಲಕ್ಷ ರೂ. ಸಾಲ ಮಾಡಿದ್ದರು. ಆದ್ರೆ, ಜಿ.ಪಂ ಚುನಾವಣೆಗೆ ಪಕ್ಷವೊಂದರಿಂದ ಟಿಕೆಟ್ ವಂಚಿತರಾಗಿದ್ದರು. ಇದರಿಂದ ಬೇಸತ್ತ ಚೆನ್ನಪ್ಪ, ರಾಜಕೀಯ ಜಂಜಾಟದಿಂದ ಸ್ವಲ್ಪ ಮಟ್ಟಿಗೆ ದೂರ ಉಳಿದರು.
ರಾಜಕೀಯ ಕ್ಷೇತ್ರ ಕೈಗೂಡಲಿಲ್ಲ ಇನ್ನೇನು ಮಾಡುವುದು ಎಂಬ ಯೋಚನೆಯಲ್ಲಿದ್ದ ಚೆನ್ನಪ್ಪ ಅವರಿಗೆ ತಕ್ಷಣ ಹೊಳೆದಿದ್ದೇ ಕಾಡು ಕೃಷಿ. ಚುನಾವಣೆಗೆಂದು ಮಾಡಿದ್ದ 50 ಲಕ್ಷ ರೂ. ಸಾಲದ ಹಣವನ್ನು ಖರ್ಚು ಮಾಡಿ, ಚೆನ್ನಪ್ಪ ಅವರು, ಸುಮಾರು ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದ 30 ಎಕರೆ ಜಮೀನಿನಲ್ಲಿ ಕೃಷಿ ಮಾಡೋಕೆ ಶುರು ಮಾಡ್ತಾರೆ. ಆರಂಭದಲ್ಲಿ ಕಲ್ಲು -ಮುಳ್ಳು ಗಿಡ-ಗಂಟಿಗಳಿಂದ ತುಂಬಿದ್ದ ಜಮೀನನ್ನು ಜೆಸಿಬಿಯಿಂದ ಹದಗೊಳಿಸಿದರು. ಸುಮಾರು ಐದು ಹಂತಗಳನ್ನು ಮಾಡಿ, ಮಳೆ ನೀರು ಹೊರಗಡೆ ಹರಿದು ಹೋಗದಂತೆ ಜಮೀನಿನಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದರು. ಈ ಎಲ್ಲಾ ಪರಿಶ್ರಮಗಳ ಫಲವಾಗಿ, ಕಾಡಿನ ರೀತಿ ಇದ್ದ ಚೆನ್ನಪ್ಪ ಅವರ ಜಮೀನಿನಲ್ಲಿ ಇದೀಗ, ಸುಮಾರು ಐದು ಸಾವಿರ ತೆಂಗು, ಐದು ಸಾವಿರ ತೇಗ, ಐದು ಸಾವಿರ ಪೇರು, ಪಪ್ಪಾಯಿ, ನುಗ್ಗೇಕಾಯಿ ಬೆಳೆ, ಅಂಜೂರ ಹಣ್ಣು, ಹೀಗೆ ನಾನಾ ರೀತಿಯ ತೋಟಗಾರಿಕೆ ಬೆಳೆಗಳು ನಳನಳಿಸುತ್ತಿವೆ. ಇವುಗಳಿಂದ ಚೆನ್ನಪ್ಪ ಅವರಿಗೆ ಲಕ್ಷಾಂತರ ರೂ. ಲಾಭ ಬರುತ್ತಿದೆ.
ಇನ್ನು, ಇಷ್ಟೆಲ್ಲಾ ಬೆಳೆಗಳನ್ನು ಚೆನ್ನಪ್ಪ ಅವರು ಒಂದೇ ಬಾರಿಗೆ ನಾಟಿ ಮಾಡಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ಇವುಗಳನ್ನ ಪೋಷಣೆ ಮಾಡುತ್ತಾ ಬರ್ತಿದ್ದಾರೆ. ವಿಶೇಷ ಅಂದ್ರೆ, ಈ ಬೆಳೆಗಳಿಗೆ ಗೊಬ್ಬರವನ್ನಾಗಲಿ, ಔಷಧವನ್ನಾಗಲಿ ಹಾಕುವುದಿಲ್ಲ. ಕಳೆಯನ್ನಂತೂ ಮೊದಲೇ ತೆಗೆಸುವುದಿಲ್ಲ. ಬೆಳೆದಿರೋ ಕಸವನ್ನೇ ರೂಟರ್ ಹೊಡೆಸಿ, ಅದನ್ನೇ ಗೊಬ್ಬರವನ್ನಾಗಿ ಪರಿವರ್ತಿಸುತ್ತಾರೆ. ಇಡೀ 30 ಎಕರೆ ಜಮೀನು ನಿರ್ವಹಣೆಗೆ ಕೇವಲ ಒಬ್ಬ ಕಾರ್ಮಿಕನನ್ನು ನೇಮಿಸಿದ್ದಾರೆ. ನೀರನ್ನು ಮಾತ್ರ ಸರಿಯಾದ ಸಮಯಕ್ಕೆ ಹಾಯಿಸ್ತಿದ್ದಾರೆ. ಇದಕ್ಕಾಗಿ 12 ಬೋರ್ವೆಲ್ಗಳನ್ನ ಕೊರೆಯಿಸಿದ್ದಾರೆ.
ನೀರಿಗಾಗಿ ಡ್ರಿಪ್ಗಳನ್ನ ಅಳವಡಿಸಿ ನೀರು ಪೋಲಾಗದಂತೆ ನೋಡಿಕೊಂಡಿದ್ದಾರೆ. ಚೆಕ್ ಡ್ಯಾಂಗಳ ಮೂಲಕ ಬೋರ್ವೆಲ್ಗಳಲ್ಲಿ ವರ್ಷಪೂರ್ತಿ ಅಂತರ್ಜಲ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಚೆನ್ನಪ್ಪ ಅವರ ಜಮೀನಿನ ಒಳ ಹೊಕ್ಕಂತೆ, ಯಾವುದೋ ಕಾಡಲ್ಲಿ ಹೋಗುತ್ತಿದ್ದೇವೇನೊ ಎಂದು ಭಾಸವಾಗುತ್ತದೆ. ರೈತ ಚೆನ್ನಪ್ಪ ಅವರು ವಿಶಿಷ್ಟ ಕೃಷಿ ಪ್ರಯೋಗಕ್ಕೆ ಊರಿನ ಇತರ ರೈತರೂ ಫಿದಾ ಆಗಿದ್ದಾರೆ. ಕೃಷಿ ಮಾಡಿದರೆ ಈ ರೀತಿ ಮಾಡಬೇಕು ಎಂದು ಚೆನ್ನಪ್ಪ ಅವರನ್ನು ಕೊಂಡಾಡ್ತಿದ್ದಾರೆ.