ಗದಗ : ನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ.
ನೂತನ ಮೋಟಾರು ವಾಹನ ಕಾಯಿದೆಯನ್ವಯ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಚುರುಕು ಮುಟ್ಟಿಸಿದ್ದು, ಹೆಲ್ಮೆಟ್ ಇಲ್ಲದ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ದಂಡ ವಿಧಿಸುತ್ತಿದ್ದ ದೃಶ್ಯಗಳು ಅವಳಿ ನಗರದಲ್ಲಿ ಕಂಡು ಬಂದಿತು.
ಇಂದು ಒಂದೇ ದಿನದಲ್ಲಿ ಸುಮಾರು 207 ಪ್ರಕರಣಗಳನ್ನು ದಾಖಕಿಸಿಕೊಂಡ ಪೊಲೀಸರು, ಸುಮಾರು 1,03,500 ರೂ ಗಳಷ್ಟು ದಂಡವನ್ನು ವಸೂಲಿ ಮಾಡಿದ್ದಾರೆ.
ಬೆಟಗೇರಿ ಹೊರವಲಯ, ಭೀಷ್ಮ ಕೆರೆ ಪಕ್ಕ, ಕಿತ್ತೂರು ಚನ್ನಮ್ಮ ಉದ್ಯಾನ, ಸ್ಟೇಶನ್ ರಸ್ತೆ ಸೇರಿದಂತೆ ಅವಳಿ ನಗರದ ಹಲವೆಡೆ ಕಾರ್ಯಚರಣೆಗೆ ಇಳಿದ ಪೊಲೀಸರು, ಹೆಲ್ಮೆಟ್, ವಾಹನ ಚಾಲನಾ ಪರವಾನಗಿ, ವಿಮೆ ಸಹಿತ ಅಗತ್ಯ ದಾಖಲೆ ಇಲ್ಲದ ವಾಹನ ಸವಾರರಿಗೆ ದಂಡ ವಿಧಿಸಿದರು.
ಪೊಲೀಸರು ಏಕಾಏಕಿ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಿದ ವಿಷಯ ತಿಳಿಯುತ್ತಿದ್ದಂತೆ ಅನೇಕ ವಾಹನ ಸವಾರರು ದಾಖಲಾತಿ, ಹೆಲ್ಮೆಟ್ ಇಟ್ಟುಕೊಂಡು ಸಂಚರಿಸಿದರು.