ಗದಗ: ತಾಲೂಕಿನ ರೈತರಿಗೆ ಮಳೆಯಿಂದಾಗಿ ಬೆಳೆಹಾನಿ ಪರಿಹಾರ ನೀಡಿಲ್ಲ. ಸಮೀಕ್ಷೆಯಲ್ಲಿ ಗದಗ ತಾಲೂಕನ್ನು ಬೆಳೆಹಾನಿ ಪರಿಹಾರದಿಂದ ಕೈಬಿಡಲಾಗಿದೆ ಎಂದು ರೈತರು ಬೀದಿಗಳಿದು ಪ್ರತಿಭಟಿಸಿದರು.
ತಾಲೂಕಿನಲ್ಲಿ ಈ ಬಾರಿ ಅತೀ ಹೆಚ್ಚು ಮಳೆಯಾಗಿದ್ದು, ಕಳೆದ ಎರಡ್ಮೂರು ತಿಂಗಳಿನಿಂದ ನಿರಂತರ ಮಳೆಗೆ ಈರುಳ್ಳಿ, ಗೋವಿನ ಜೋಳ, ಸೂರ್ಯಕಾಂತಿ, ಹೆಸರು, ತರಕಾರಿ, ಹೂವಿನ ಬೆಳೆ ಮತ್ತು ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಮೋಡಕವಿದ ವಾತಾವರಣದಿಂದ ರೋಗಕ್ಕೀಡಾಗಿವೆ. ಈರುಳ್ಳಿ ಬೆಳೆಗಳು ಈಗಲೂ ಮಳೆ ನೀರಲ್ಲಿ ನಿಂತು ಕೊಳೆಯುತ್ತಿವೆ. ಆದರೆ, ತಾಲೂಕಿನ 60 ಹಳ್ಳಿಗಳ ರೈತರನ್ನು ಬೆಳೆಹಾನಿ ಪರಿಹಾರದಿಂದ ಕೈಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಬಸವರಾಜ್ ಬೆಳದಡಿ ಮಾತನಾಡಿ, ಸಿಎಂ ಯಡಿಯೂರಪ್ಪ ರೈತರ ಹೆಸರಿನಲ್ಲಿ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಧಿಕಾರ ಸಿಕ್ಕ ಬಳಿಕ ರೈತರಿಗೆ ಅನ್ಯಾಯ ಮಾಡುತ್ತಾರೆ. ಹೀಗೆ ಪ್ರತಿ ಸರ್ಕಾರಗಳೂ ರೈತರಿಗೆ ಚಾಕು ಹಾಕುತ್ತಿವೆ. ಯಡಿಯೂರಪ್ಪನಿಗೆ ಮುಷ್ಟಿ ಮಾಡಿ ಹೊಡೆದರೆ ಮತ್ತೆ ಹಸಿರು ಬಣ್ಣದತ್ತ ವಾಲಬೇಕಾಗುತ್ತದೆ ಎಚ್ಚರವಿರಲಿ ಅಂತ ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದರು.