ಗದಗ : ದಿಢೀರ್ ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾದ ರೈತ ಸಮುದಾಯ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿರುವ ಘಟನೆ ಕೋಟುಮಚಗಿ ಗ್ರಾಮದಲ್ಲಿ ನಡೆದಿದೆ.
ರೈತ ಹಾಗೂ ಕೂಲಿ ಕಾರ್ಮಿಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಈರುಳ್ಳಿ ಬೆಳೆಗಾರರು ಹೆದ್ದಾರಿ ತಡೆದಿದಲ್ಲದೇ, ಸಾಲ ಮಾಡಿ ಬೆಳೆದ ಸಾಕಷ್ಟು ಪ್ರಮಾಣದ ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತ ಸಮುದಾಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರಸ್ತೆಯಲ್ಲೇ ಧರಣಿ ಕುಳಿತರು. ಪರಿಣಾಮ ಕೆಲಕಾಲ ಪ್ರಯಾಣಿಕರು ಪರದಾಡುವಂತಾಯಿತು. ನಂತರ ಪ್ರತಿಭಟನಾಕಾರರು ತಹಶೀಲ್ದಾರರಿಗೆ, ಈರುಳ್ಳಿ ಬೆಳೆದ ಬೆಳೆಗಾರರರಿಗೆ ಸರಿಯಾದ ಬೆಲೆ ನಿಗಧಿ ಮಾಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡರು.