ಗದಗ: ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕಾಗುತ್ತದೆ ಅಂತ ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.
ಗದಗದಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಮುಕ್ತ ಭಾರತ ಮಾಡುವ ಹೇಳಿಕೆಗೆ ತಿರುಗೇಟು ನೀಡಿದ ಅವರು ನಾನು ಭವಿಷ್ಯ ಹೇಳುತ್ತೇನೆ ಕೇಳಿ, ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕು ಎಂದರು. ಪೌರತ್ವ ತಿದ್ದುಪಡಿ ಕುರಿತು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ನವರು ಯಾವ ಕಾರಣಕ್ಕಾಗಿ ಪೌರತ್ವ ವಿರೋಧ ಮಾಡುತ್ತಿದ್ದೀರಿ ಕೇಳಿ ಅಂತ ಪ್ರಶ್ನೆ ಮಾಡಿದರು.
ನಾವು ಭಾರತೀಯರೆಂದು ಪ್ರಪಂಚಕ್ಕೆ ಗೊತ್ತಾಗಬೇಕು. ಪೌರತ್ವ ಕಾಯ್ದೆಯಲ್ಲಿ ಯಾವುದೇ ನ್ಯೂನತೆಗಳಿಲ್ಲ. ಪಾಕಿಸ್ತಾನದವರು ಪೌರತ್ವ ಕಾಯ್ದೆ ಜಾರಿ ಮಾಡಿದರೆ ತಪ್ಪು ಆಗೋದಿಲ್ಲ, ಭಾರತದಲ್ಲಿ ಜಾರಿ ಮಾಡಿದರೆ ತಪ್ಪಾ ಅಂತ ಪ್ರಶ್ನಿಸಿದರು. ಹೀಗಾಗಿ ಕಾಂಗ್ರೆಸ್ ನೀತಿಯನ್ನು ನಾನು ಖಂಡಿಸುತ್ತೇನೆ ಎಂದರು. ಇನ್ನು ದೇಶದ ಜನ ನರೇಂದ್ರ ಮೋದಿ ಅವರ ಆಡಳಿತಕ್ಕೆ ಮೆಚ್ಚಿ ಬಹುಮತ ನೀಡಿದ್ದಾರೆ ಯಾರು ಗೊಂದಲ ಮಾಡಿಕೊಂಡಿಲ್ಲ, ಕಾಂಗ್ರೆಸ್ ನವರು ಹತಾಶರಾಗಿ ಇಂತಹ ಹೇಳಿಕೆ ಕೊಡುತ್ತಾರೆ ಅವರ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಅಂದರು. ಇನ್ನು ಕಾಂಗ್ರೆಸ್ ಪಕ್ಷ ದಲಿತರನ್ನು ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು 18 ನೇ ಶತಮಾನ ಅಲ್ಲ ಇದು 21ನೇ ಶತಮಾನ ಇಲ್ಲಿ ವಿದ್ಯಾವಂತರ ಸಂಖ್ಯೆ ಜಾಸ್ತಿ ಇದೆ. ಜನರು ಎಲ್ಲವನ್ನು ನಂಬೋದಿಲ್ಲಾ. ಕಾಂಗ್ರೆಸ್ 80 ವರ್ಷ ಏನು ಮಾಡಿದೆ ಅಂತ ಜನರಿಗೆ ಗೊತ್ತಿದೆ ಇವರು ಮಾಡಿರುವ ಕೃತ್ಯಗಳನ್ನು ನೋಡಿದ್ದಾರೆ ಹೀಗಾಗಿ ಅವರ ಬೇಳೆ ಬೇಯೋದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.