ಗದಗ: ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದಲ್ಲಿ 80 ವರ್ಷದ ವೃದ್ಧೆಗೆ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ವೃದ್ಧೆ ಇರುವ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಗದಗ ಜಿಲ್ಲಾಧಿಕಾರಿ ಪತ್ರ ಗೊಂದಲಮಯವಾಗಿದ್ದು, ಜಿಲ್ಲೆಯಲ್ಲಿ ಭಯ, ಆತಂಕ ಸೃಷ್ಟಿಸಿದೆ. ಒಂದು ಕಡೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಧೃಡಪಟ್ಟಿದೆ ಎಂದು ನಮೂದಾಗಿದೆ. ಮತ್ತೊಂದೆಡೆ 80 ವರ್ಷದ ವೃದ್ದೆಗೆ ಕೊರೊನಾ ವೈರಸ್ ಶಂಕೆ ಮತ್ತು ಅನುಮಾನ ಹಿನ್ನೆಲೆ ಎಂದು ಕಂಟೈನ್ಮೆಂಟ್ ಏರಿಯಾ ಎಂದು ಘೋಷಣೆ ಮಾಡಲಾಗಿದೆ ಎಂದು ಬರೆಯಲಾಗಿದೆ.
ಕೊರೊನಾ ಸೋಂಕಿನ ಬಗ್ಗೆ ಸ್ಪಷ್ಟನೆ ನೀಡಬೇಕಾದ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಕೊರೊನಾ ಶಂಕಿತ ವೃದ್ಧೆ ವಾಸವಿದ್ದ ಏರಿಯಾ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆಯಾಗಿದ್ದು, ವೃದ್ದೆಯ ಸಂಪರ್ಕ ಪತ್ತೆ ಹಚ್ಚಲು 5 ಜನ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿದೆ.
ಇನ್ನು 80 ವರ್ಷದ ವೃದ್ಧೆ ಇರುವ ಪ್ರದೇಶಕ್ಕೆ ಬರುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್ ಹಾಗೂ ಬಿದಿರಿನ ತಟ್ಟಿ ಮೂಲಕ ಬಂದ್ ಮಾಡಲಾಗಿದೆ.