ಧಾರವಾಡ: ಮನೆ ಬಿದ್ದಿದ್ದಕ್ಕೆ ಹೆಚ್ಚಿನ ಪರಿಹಾರ ಸಿಕ್ಕಿಲ್ಲವೆಂದು ನೊಂದ ವಿಶೇಷ ಚೇತನ ಮಹಿಳೆವೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಿತ್ತೂರು ಚೆನ್ನಮ್ಮ ಪಾರ್ಕ್ನಲ್ಲಿ ನಡೆದಿದೆ.
ತಾಲೂಕಿನ ದುಬ್ಬನಮರಡಿ ಗ್ರಾಮದ ವಿಶೇಷ ಚೇತನ ಮಹಿಳೆ ಮಂಜುಳಾ ಕಲ್ಲೂರ ಆತ್ಮಹತ್ಯೆ ಮಾಡಿಕೊಂಡವಳು. ಇಂದು ಮಧ್ಯಾಹ್ನ ಪಾರ್ಕಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತದೇಹವಿದ್ದ ಸ್ಥಳದಲ್ಲಿ ವಿಷದ ಬಾಟಲಿ ಕೂಡಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನಿರಂತರ ಸುರಿದ ಮಳೆಗೆ ಇದ್ದ ಒಂದು ಮನೆ ಕೂಡಾ ಕುಸಿದಿತ್ತು. ಹಲವು ಬಾರಿ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಮಂಜುಳಾ ಮನವಿ ಮಾಡಿಕೊಂಡಿದ್ದಳು. ಕೇವಲ 50 ಸಾವಿರ ರೂ. ಪರಿಹಾರ ಬಂದಿತ್ತು. ಆದ್ರೆ ಹೆಚ್ಚಿನ ಪರಿಹಾರಕ್ಕಾಗಿ ಮಂಜುಳಾ ಮನವಿ ಮಾಡಿದ್ದಳು ಎನ್ನಲಾಗ್ತಿದೆ. ಜಿಲ್ಲಾಡಳಿತದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲವೆಂದು ಮನನೊಂದು ವಿಷ ಸೇವಿಸಿ ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.