ಹುಬ್ಬಳ್ಳಿ: ಕುಂದಗೋಳ ಮತ್ತು ಚಿಂಚೋಳಿ ಎರಡೂ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ. ತುಂಬಾ ದಿನಗಳಿಂದ ಬಿಜೆಪಿಯವರು ಆಸೆ ಇಟ್ಟುಕೊಂಡಿದ್ದಾರೆ. ನಾವು ನಮ್ಮ ಸಾಮರ್ಥ್ಯವನ್ನು ಮೇ 23ಕ್ಕೆ ತೊರಿಸುತ್ತೇವೆ ಎಂದುರು.
ರಾಜ್ಯ ಸರ್ಕಾರ ಸುಭದ್ರ ವಾಗಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯನ್ನು ಪೂರೈಸುತ್ತೆ. ಬಿಜೆಪಿಯವರು ಮೇ 23 ಕ್ಕೆ ಫಲಿತಾಂಶ ಬಂದ ಬಳಿಕ ಸರ್ಕಾರ ಬೀಳುತ್ತದೆ ಎನ್ನುತ್ತಿದ್ದಾರೆ. ಮೇ 24ಕ್ಕೆ ಹೊಸ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿತ್ತಿದ್ದಾರೆ. ಆದರೆ, ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.
ಚಲುವರಾಯಸ್ವಾಮಿ ಡಿನ್ನರ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವರದಿ ತರಿಸಿಕೊಳ್ಳುತ್ತಾರೆ. ವರದಿಯಲ್ಲಿನ ಸಾಧಕ-ಬಾಧಕಗಳನ್ನ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.
ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ, ಇದು ವಿಚಿತ್ರವಾದ ಸನ್ನಿವೇಶ. ಹಿಂದೆ ಯಾವಾಗಲೂ ಚುನಾವಣೆ ಆಯೋಗ ಈ ರೀತಿ ನಡೆದುಕೊಂಡಿಲ್ಲ. ಬರಗಾಲದ ಕಾಮಗಾರಿ ಕೈಗೊಳ್ಳಲು ಅವಕಾಶ ಮಾಡಿಕೊಡುತ್ತಿಲ್ಲ. ಆಯೋಗಕ್ಕೆ ಮನವಿ ಮಾಡಿದ್ದೇವೆ.
ಆದರೆ, ಆಯೋಗದಿಂದ ಸರ್ಕಾರಕ್ಕೆ ಪತ್ರ ಬಂದಿದೆ. ಯಾವುದೇ ಸಭೆಗಳನ್ನು ಮಾಡಬಾರದೆಂದು, ಅಧಿಕಾರಿಗಳ ಜತೆ ಸಭೆ ಮಾಡುವುದಕ್ಕೆ ಅವಕಾಶ ನೀಡುತ್ತಿಲ್ಲ. ನೀತಿ ಸಂಹಿತೆ ಕಾರಣಕ್ಕೆ ಎರಡು ತಿಂಗಳು ಸರ್ಕಾರ ಯಾವುದೇ ಕೆಲಸ ಮಾಡಲಾಗದ ಸ್ಥಿತಿಯಲ್ಲಿದೆ. ಸರ್ಕಾರ ಕೈ ಕಟ್ಟಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ಹೊರ ಹಾಕಿದರು.