ಹುಬ್ಬಳ್ಳಿ: ಇಡೀ ದೇಶದಲ್ಲಿ ಬಿಜೆಪಿ ಆರ್ಭಟ ಇದ್ದರೂ ಸಹ ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೀರಿ. ಕುಸಮಾ ಶಿವಳ್ಳಿ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಬೆಂಬಲ ಸದಾ ನಮ್ಮೊಂದಿಗೆ ಹೀಗೆ ಇರಲಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಕುಂದಗೋಳ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇವಿಎಮ್ಗಳ ಬಗ್ಗೆ ಸಂದೇಹ ಏನೇ ಇದ್ದರು ಫಲಿತಾಂಶ ಸ್ವಾಗತಿಸಲೇಬೇಕು. ದೇಶದ ಜನತೆ ನೀಡಿದ ತೀರ್ಪನ್ನು ಸ್ವಾಗತಿಸಲೇಬೇಕು ಎಂದರು.
ದಿವಂಗತ ಶಿವಳ್ಳಿ ಅವರ ಜನಪರ ಕಾರ್ಯವೈಖರಿ ನೆನದ ಡಿಕೆಶಿ, ನನಗೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕಣ್ಣೀರು ಹಾಕಿರಲಿಲ್ಲ. ಆದರೆ ಶಿವಳ್ಳಿ ಅಗಲಿಕೆಯಿಂದ ನಾನು ಕಣ್ಣೀರು ಹಾಕಿದ್ದೆ. ಆದರೆ ನನಗೆ ಎಷ್ಟೇ ಕಷ್ಟ ಆದರೂ ಕಣ್ಣೀರು ಹಾಕಿಲ್ಲ ಎಂದು ಹೇಳಿದರು.
ಕುಂದಗೋಳ ಅಭಿವೃದ್ಧಿ ವಿಚಾರವಾಗಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ. ಕ್ಷೇತ್ರದಲ್ಲಿ ವೈಯಕ್ತಿಕ ಕಚೇರಿ ತೆರೆದು ಜನರ ಸೇವೆಗೆ ಶ್ರಮಿಸುವೆ. ಕ್ಷೇತ್ರದ 13 ಸಾವಿರ ಮನೆಗಳ ನಿರ್ಮಾಣಕ್ಕೆ ನಾವು ಯೋಜನೆ ರೂಪಿಸಿದ್ದೇವೆ. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ತೀರ್ಮಾನ ಕೈಗೊಂಡಿದ್ದೇವೆ. ಕುಂದಗೋಳ ಕ್ಷೇತ್ರವನ್ನು ನಾನು ಬಿಡುವುದಿಲ್ಲ ಎಂದು ಜನತೆಗೆ ಭರವಸೆ ನೀಡಿದರು.
ಶ್ರೀರಾಮುಲುಗೆ ಟಾಂಗ್ ನೀಡಿದ ಟ್ರಬಲ್ ಶೂಟರ್:
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ನಾನು ಪ್ರಚಾರ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವಾಗ ಬಿಜೆಪಿ ಎಂಎಲ್ಎ ಒಬ್ಬರು ಸಿಕ್ಕಿದ್ದರು. ನೀವು ಬಿಜೆಪಿಗೆ ಬಂದು ಬಿಡಿ ಅಂದಿದ್ದರು. ಅವರು ಯಾರು ಅಂತಾ ನಾ ಹೇಳುವುದಿಲ್ಲ ಎಂದು ಡಿಕೆಶಿ ಪರೋಕ್ಷವಾಗಿ ಶ್ರೀರಾಮಲುಗೆ ಟಾಂಗ್ ನೀಡಿದರು.
ಕುಂದಗೋಳದಲ್ಲಿ 30 ಸಾವಿರ ಮತಗಳ ಅಂತರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಹ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಪಾಪ ಅವರು ಇದೀಗ ವಿಧಾನಸೌಧದ ಹೊರಗಡೆ ನಿಂತಿದ್ದಾರೆ ಎಂದು ಪರೋಕ್ಷವಾಗಿ ರಾಮುಲುಗೆ ಕುಟುಕಿದರು.
ಚುನಾವಣೆ ಪ್ರಚಾರ ಮುಗಿಸಿ ಮರಳುವಾಗ ಶ್ರೀರಾಮುಲು ಮತ್ತು ಡಿ ಕೆ ಶಿವಕುಮಾರ್ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಈ ರೀತಿಯ ಹೇಳಿಕೆ ನೀಡುವ ಮೂಲಕ ಡಿಕೆಶಿ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ.