ಹುಬ್ಬಳ್ಳಿ : ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆ ಇದೀಗ ಕಸದಲ್ಲಿಯೇ ರಸ ತೆಗೆಯುವ ಮೂಲಕ ಪಾಲಿಕೆಗೆ ಆದಾಯ ಹೆಚ್ಚಿಸುವ ಹೊಸ ಪ್ರಯತ್ನವೊಂದನ್ನು ಕೈಗೆತ್ತಿಕೊಂಡಿದೆ.
ಮಹಾನಗರದಲ್ಲಿ ಇಷ್ಟು ದಿನ ತಲೆ ಬಿಸಿಯಾಗಿದ್ದ, ಕಟ್ಟಡ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಪಾಲಿಕೆ ಮುಂದಾಗಿದೆ. ಈ ಮೂಲಕ ಪಾಲಿಕೆ ಆದಾಯಕ್ಕೆ ಮತ್ತೊಂದು ಮೂಲ ಕಂಡು ಹಿಡಿದಿದೆ.
ಕಟ್ಟಡ ನೆಲಸಮಗೊಳಿಸುವ ವೇಳೆ ನೂತನ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಕಾಂಕ್ರೀಟ್, ಇಟ್ಟಿಗೆ, ಕಬ್ಬಿಣದಂತಹ ವಸ್ತುಗಳು ನಿರುಪಯುಕ್ತವಾಗುತ್ತಿವೆ. ಇಂತಹ ತ್ಯಾಜ್ಯ ಸದ್ಬಳಕೆ ಮಾಡಿಕೊಂಡು ಪಾಲಿಕೆಗೆ ಆದಾಯದ ಮೂಲ ಮಾರ್ಪಡಿಸಲು ಪಾಲಿಕೆ ನಿರ್ಧರಿಸಿದ್ದು, ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಿಂದ ಎಲ್ಲೆಂದರಲ್ಲಿ ಬಿಸಾಕುತಿದ್ದ ತ್ಯಾಜ್ಯ ನಿರ್ವಹಣೆ ಜೊತೆಗೆ ಪಾಲಿಕೆಗೆ ಆದಾಯ ಹರಿದು ಬರಲಿದೆ.
ಧಾರವಾಡ ಸಮೀಪದ ಶಿವಳ್ಳಿ ಗ್ರಾಮದಲ್ಲಿರುವ ಪಾಲಿಕೆಯ 67 ಎಕರೆ ಪ್ರದೇಶದಲ್ಲಿ ಒಟ್ಟು ಐದು ಎಕರೆ ವ್ಯಾಪ್ತಿಯಲ್ಲಿ 5.30 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ನಿತ್ಯವೂ 50 ಟನ್ ತ್ಯಾಜ್ಯ ನಿರ್ವಹಿಸಬಹುದಾಗಿದೆ. ಒಂದು ವೇಳೆ ಸಿ ಅಂಡ್ ಡಿ ತ್ಯಾಜ್ಯ ಬಂದರೂ ಸಂಗ್ರಹಿಸಿಡಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಂಗ್ರಹಿಸಿದ ಸಿ ಅಂಡ್ ಡಿ ವೇಸ್ಟ್ ಸಾಗಣೆ ಮಾಡಲು ಐದರಿಂದ ಆರು ಕಡೆಗಳಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.
ಇಲ್ಲಿ ನಿರ್ವಹಣೆಯಾಗುವ ತ್ಯಾಜ್ಯ ಮರುಬಳಕೆಗೆ ಉಪಯುಕ್ತವಾಗಲಿದೆ. ಇಲ್ಲಿನ ಕಬ್ಬಿಣ, ಸಿಮೆಂಟ್ ಪ್ರತ್ಯೇಕಿಸುವುದರಿಂದ ಎಂ ಸ್ಯಾಂಡ್ ಉತ್ಪಾದನೆಗೆ ಅನುಕೂಲವಾಗಲಿದೆ. ಘಟಕದಲ್ಲಿ ಸಿಮೆಂಟ್ ಗಟ್ಟಿಗಳನ್ನು ಪುಡಿಯಾಗಿಸಿ ಸಂಸ್ಕರಿಸಲಿದೆ, ಫೇವರ್ಸ್, ಬೆಂಚ್ ಹಾಗೂ ಇತರ ಪ್ರಯೋಜನಕಾರಿ ಪರಿಕರಗಳನ್ನು ಉತ್ಪಾದಿಸಲು ಅನುಕೂಲವಾಗಿದೆ. ಒಟ್ಟಿನಲ್ಲಿ ಹು - ಧಾ ಮಹಾನಗರ ಪಾಲಿಕೆ ವಿನೂತನ ಪ್ರಯೋಗದಿಂದ ಪಾಲಿಕೆಗೆ ಆದಾಯ ಬರುವ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಲು ಸಹಾಯಕವಾಗಿದೆ.