ಹುಬ್ಬಳ್ಳಿ: ಸಾಧಿಸುವ ಚಲವೊಂದಿದ್ದರೆ ಜೀವನದಲ್ಲಿ ಏನನ್ನಾದರೂ ಮಾಡಬಹುದು ಎಂಬುದು ಸತ್ಯ. ಇದಕ್ಕೆ ಸೂಕ್ತ ನಿದರ್ಶನವೆಂಬಂತೆ ಹುಬ್ಬಳ್ಳಿಯ ಯೋಗ ಪಟುವೊಬ್ಬರು ತಮ್ಮ 47ನೇ ವಯಸ್ಸಿನಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ತಮ್ಮ ದೇಹದಲ್ಲಿ ಎಲುಬುಗಳು ಇವೆಯೋ ಇಲ್ಲವೋ ಎನ್ನುವಂತೆ ಅಂಗಾಂಗಳನ್ನು ಬಾಗಿಸುವ ಮೂಲಕ ಯೋಗಾಸನ ಮಾಡುತ್ತಿರುವ ಇವರ ಹೆಸರು ವಿನಾಯಕ ಕೊಂಗಿ. ಮೂಲತಃ ಹುಬ್ಬಳ್ಳಿಯ ಆನಂದನಗರ ನಿವಾಸಿ. ತಮ್ಮ 47ನೇ ವಯಸ್ಸಿನಲ್ಲೇ ಯೋಗದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ವರನಟ ಡಾ. ರಾಜಕುಮಾರ್ ಅವರ ಪ್ರೇರಣೆಯಿಂದ ಯೋಗದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ: ಸೌಥ್ ಕೊರಿಯಾ, ರಾಂಚಿ, ಝಾರ್ಖಂಡ್, ಪಟಿಯಾಲ್, ದೆಹಲಿ, ರಾಜಸ್ಥಾನ, ಬೆಂಗಳೂರು ಸೇರಿದಂತೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಯೋಗಾಸನದ ಮೂಲಕ ಸಾಕಷ್ಟು ಬಹುಮಾನ ಹಾಗೂ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 32 ಕ್ಕೂ ಹೆಚ್ಚು ಬಹುಮಾನಗಳಿಗೆ ಭಾಜನರಾದ ವಿನಾಯಕ ಕೊಂಗಿ ತಮ್ಮ ದೇಹವನ್ನು ಹೇಗೆ ಬೇಕೋ ಹಾಗೆ ಸಲೀಸಾಗಿ ಬಾಗಿಸಿ 47ನೇ ವಯಸ್ಸಿನಲ್ಲಿ ಮಾಡಲು ಅಸಾಧ್ಯವಾದ ಆಸನಗಳನ್ನು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಸಾಧನೆಗೆ ಮನೆಯವರ ಸಹಕಾರ: ವೃಕ್ಷಾಸನ, ಪಶ್ಚಿಮೋತ್ತಾಸನ, ಉಷ್ಟ್ರಾಸನ, ಪದ್ಮಾಸನ, ಆಕರ್ಣ ಧನುರಾಸನ, ಅರ್ಧ ಮತ್ಸ್ಯೇಂದ್ರಾಸನ, ಹಲಾಸನಾ, ಮತ್ಸ್ಯಾಸನ, ಚಕ್ರಾಸನ, ಧನುರಾಸನ, ತ್ರೀಕೊನಾಸನ, ಏಕಪಾದ ರಾಜಕಪೂಥಾಸನ, ವಿಶ್ವಾಮಿತ್ರಾಸನ, ಕಾಲಭೈರವಾಸನ, ವಿಶಿಷ್ಟಾಸನ, ಕಶ್ಯಪಾಸನ, ಸ್ವಸ್ಥಿಕಾಸನ, ಓಂಕಾರಾಸನ, ಪದ್ಮಭಕಾಸನ, ಹನುಮಾನಾಸನ ಸೇರಿದಂತೆ ಹಲವಾರು ಭಂಗಿಗಳನ್ನು ಮಾಡುತ್ತಾರೆ. ಇವರ ಸಾಧನೆಗೆ ಪತ್ನಿ ವಾಣಿಶ್ರೀ ಸಾಥ್ ನೀಡಿದ್ದಾರೆ. ಪತಿಯ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.