ಹುಬ್ಬಳ್ಳಿ: ರಾಜ್ಯದ ಏಕೈಕ ಬಿಆರ್‌ಟಿಎಸ್ ಸೇವೆಗೆ ತೊಡಕಾಗಿದ್ದ ಬೇಂದ್ರೆ ನಗರ ಸಾರಿಗೆ ಸಂಚಾರಕ್ಕೆ ಬ್ರೇಕ್ ಬೀಳ್ತಾಯಿದೆ. ಅವಳಿ ನಗರದ ಬದಲು ಇತರೆ ಮಾರ್ಗಗಳನ್ನು ಗುರುತಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಖಾಸಗಿ ಲಾಬಿಗೆ ಮಣಿದು ಹೆಚ್ಚಿನ ಆದಾಯವಿರುವ ಮಾರ್ಗಗಳನ್ನು ನೀಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿ- ಧಾರವಾಡ ನಡುವೆ ಸಂಪರ್ಕ ಕೊಂಡಿಯಾಗಿ ತ್ವರಿತವಾಗಿ ಬಸ್ ಸಂಚಾರ ಕಲ್ಪಿಸುವ ಬಿಆರ್‌ಟಿಎಸ್ ಯೋಜನೆಯಡಿ ನೂರಾರು ಬಸ್ಗಳು ಪ್ರತಿನಿತ್ಯ ಸಂಚಾರ ಮಾಡುತ್ತಿವೆ. ಇದರಿಂದ ಲಕ್ಷಾಂತರ ನಷ್ಟ ಅನುಭವಿಸುವಂತಾಗಿದೆ. 18 ವರ್ಷಗಳಿಂದ ಇರುವ ಬೇಂದ್ರೆ ಸಾರಿಗೆ ಇದಕ್ಕೆ ಪೈಪೋಟಿ ನಡೆಸುತ್ತಿರುವುದರಿಂದ ನಷ್ಟ ಸಂಭವಿಸುತ್ತಿದೆ. ಇದೇ ಕಾರಣಕ್ಕೆ ಬೇಂದ್ರೆ ಸಾರಿಗೆಗೆ ಬ್ರೇಕ್ ಹಾಕುವ ಅಥವಾ ಇತರೆ ಪರ್ಯಾಯ ಮಾರ್ಗ ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದವು.
2019ರ ಕರಡು ಅಧಿಸೂಚನೆ ಪ್ರಕಾರ, ಹಿಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ರಹದಾರಿ ಪರವಾನಗಿ ನವೀಕರಣ ಮಾಡಿರಲಿಲ್ಲ. ಇದೀಗ ಸರ್ಕಾರ ಬೇಂದ್ರೆ ಸಾರಿಗೆಗೆ ಪರ್ಯಾಯ ಮಾರ್ಗಗಳನ್ನು ನೀಡಿದೆ. ಅಂದುಕೊಂಡಂತೆ ಬೇರೆಡೆಗೆ ಸ್ಥಳಾಂತರಗೊಂಡರೆ ಬಿಆರ್‌ಟಿಎಸ್ ಮಿಶ್ರಪಥ ಸಾರಿಗೆ ಸುಗಮವಾಗಲಿದೆ. ನಷ್ಟದಲ್ಲಿರುವ ಸಾರಿಗೆ ಲಾಭದತ್ತ ಬರುವ ನಿರೀಕ್ಷೆ ಮಾಡಲಾಗಿದೆ. ಆದರೆ, ಸರ್ಕಾರ ಖಾಸಗೀಕರಣಕ್ಕೆ ಒತ್ತು ನೀಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಂದ್ರೆ ಸಾರಿಗೆಯ 41 ರಹದಾರಿ ಪರವಾನಗಿಗಳನ್ನು ಹುಬ್ಬಳ್ಳಿ-ಗದಗ 11, ಹುಬ್ಬಳ್ಳಿ-ಬಾಗಲಕೋಟೆ-ವಿಜಯಪುರ 15, ಬೆಳಗಾವಿ-ಅಥಣಿ-ವಿಜಯಪುರ 15, ಹಂಚಿಕೆ ಮಾಡಿ ರಾಜ್ಯ ಸಾರಿಗೆ ಪ್ರಾಧಿಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಆರ್‌ಟಿಎಸ್ ರೂವಾರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ವಿಚಾರಣಾ ಪ್ರಾಧಿಕಾರ ರಚಿಸಿ ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಬೇಂದ್ರೆ ಸಾರಿಗೆ ಸಂಸ್ಥೆಯ ಮನವಿ ಆಲಿಸಿದ್ದರು.
2003 ಡಿಸೆಂಬರ್ 31ರಂದು ಅಂದಿನ ಸರ್ಕಾರ ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲಾ ಕೇಂದ್ರದ 20 ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಪ್ರವರ್ತಕರಿಗೆ ಅವಕಾಶ ಮಾಡಿಕೊಟ್ಟಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಅಧಿಸೂಚನೆ ತಡೆಹಿಡಿಯಿತು. ಅಷ್ಟರೊಳಗೆ ಹುಬ್ಬಳ್ಳಿ-ಧಾರವಾಡ ನಡುವೆ 60 ಪರ್ಮಿಟ್‌ಗಳನ್ನು ಪಡೆದುಕೊಂಡಿದ್ದರು.
ಪರವಾನಗಿ ನವೀಕರಣಕ್ಕೆ ಅಧಿಸೂಚನೆ: 2003ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ 2006 ರಲ್ಲಿ ರದ್ದುಪಡಿಸಿತ್ತು. ಆದರೆ, 2011ರಲ್ಲಿ ಸರ್ಕಾರ ಪುನಃ 2003ರ ಅಧಿಸೂಚನೆ ಪ್ರಕಾರ, ರಹದಾರಿ ಪರವಾನಗಿ ನವೀಕರಣಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ವಾಯುವ್ಯ ಸಾರಿಗೆ ಮೆಟ್ಟಿಲೇರಿತ್ತು.
ಇದೀಗ ಸರ್ಕಾರದ ಅಧಿಸೂಚನೆ ಪ್ರಕಾರ, 18 ವರ್ಷಗಳ ಕಾಲ ಮಹಾನಗರದಲ್ಲಿ ಸಾರಿಗೆ ಸೇವೆ ನೀಡಿದ್ದ ಬೇಂದ್ರೆ ಸಾರಿಗೆ ಸ್ಥಗಿತಗೊಳ್ಳಲಿದೆ. ಆದರೆ, ಲಾಭದ ಮಾರ್ಗಗಳ ವಿತರಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಖಾಸಗೀಕರಣಕ್ಕೆ ಒತ್ತು: ಕರಾವಳಿ ಭಾಗದ ರಾಜಕೀಯ ಪ್ರಮುಖ ನಾಯಕರೊಬ್ಬರ ಒತ್ತಡದ ಮೂಲಕ ಹೆಚ್ಚಿನ ಸಾರಿಗೆ ಆದಾಯ ತರುವ ಮಾರ್ಗಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪಗಳಿವೆ. ಒಟ್ಟಾರೆಯಾಗಿ ಮೊದಲೇ ನಷ್ಟದಲ್ಲಿದ್ದ ಕೆಎಸ್ಆರ್ಟಿಸಿ ಸಂಸ್ಥೆಯ ಕಾಳಜಿ ಮಾಡದೆ ಸರ್ಕಾರ ಖಾಸಗೀಕರಣಕ್ಕೆ ಒತ್ತು ನೀಡುತ್ತಿರುವುದು ನಿಜಕ್ಕೂ ದುರಂತದ ಸಂಗತಿ.
ಓದಿ: ಸರ್ಕಾರದ ಕಾರ್ಯಕ್ರಮಗಳಲ್ಲಿ ಹಾರ, ಹಣ್ಣಿನ ಬುಟ್ಟಿ, ಶಾಲು, ಕಾಣಿಕೆ ನೀಡಬಾರದು: ಸರ್ಕಾರದ ಸುತ್ತೋಲೆ