ಹುಬ್ಬಳ್ಳಿ: ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದ ಖತರ್ನಾಕ್ ಕಿಲಾಡಿಗಳನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಜಾಪುರದಿಂದ ಖೋಟಾ ನೋಟು ಚಲಾವಣೆ ಮಾಡಲು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ತಂಗಿರುವುದು ಕುರಿತಂತೆ ಖಚಿತ ಮಾಹಿತಿ ಮೇಲೆ ಉಪನಗರ ಪೊಲೀಸರು ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಸಮಯದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ 200 ರೂ. ಮುಖ ಬೆಲೆಯ 129 ಖೋಟಾ ನೋಟುಗಳು, 100 ರೂ. ಮುಖ ಬೆಲೆಯ 77 ಖೋಟಾ ನೋಟುಗಳು ಹಾಗೂ ಯುನಿಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಂದು ಡಾಲರ್ ಪತ್ತೆಯಾಗಿದೆ. 100 ರೂ ಮುಖ ಬೆಲೆಯ 20 ಅಸಲಿ ನೋಟುಗಳು, ಒಂದು ಪ್ರಿಂಟರ್ ಮಷಿನ್ ಜೊತೆ 4 ಬಣ್ಣದ ಡಬ್ಬಿಗಳನ್ನು ಪೊಲೀಸ್ ವಶಪಡಿಸಿಕೊಂಡಿದ್ದಾರೆ.
ಗುರುರಾಜ, ಕಲ್ಲಯ್ಯ ಪಟ್ಟದ ಮಠ, ಶಿವಾನಂದ್ ಕಾರಜೋಳ್ ಹಾಗೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ದತ್ತಾತ್ರೇಯ ಕುಂಬಾರ್ ಸೇರಿ ನಾಲ್ಕು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.